ಸರಿ ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಗ್ರೀಕ್ ದೇಶದ ಅಥೆನ್ಸ್ ನಗರದ ನಾಗರೀಕನೊಬ್ಬ ಜನ ಜೀವನವು ಧರ್ಮದ ಕಪಿಮುಷ್ಠಿಯಲ್ಲಿ ಸಿಲುಕಿ, ವಿಕಾಸಕಾಣದೆ, ಕ್ರಮೇಣ ವಿಶ್ವಾಸ ಕಳೆದುಕೊಂಡು, ಅನೈತಿಕತೆ, ಸ್ವೇಚ್ಛಾಚಾರ, ಅನಾಚಾರ ತಲೆ ಎತ್ತಿದ  ವಿಷಮ ಪರಿಸ್ಥಿತಿಯಲ್ಲಿ ಅದಕ್ಕೆ ಕಾರಣಗಳನ್ನು ಹುಡುಕಿ ಸಾರ್ಥಕ ಜೀವನಕ್ಕೆ ಇರಬೇಕಾದ ಜೀವನ ದೃಷ್ಟಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದಕ್ಕೆ ಆತನನ್ನು ಧರ್ಮವಿರೋಧ ಪ್ರಚಾರದ ಆಪಾದನೆಗೆ ಗುರಿಪಡಿಸಿ ವಿಶಪ್ರಾಶನ ಮಾಡಿಸಲಾಗುತ್ತದೆ; ಅದಕ್ಕೆ ಮುನ್ನ ಕೊನೆಯ ಅವಕಾಶನೀಡಿ, ತನ್ನೆಲ್ಲ ವಿಚಾರಗಳನ್ನು ಹಿಂಪಡೆದು ಅವು ತಪ್ಪೆಂದು ಹೇಳುವುದಾದರೆ ಜೀವದಾನ ಮಾಡುವುದಾಗಿ ಅಂದಿನ ಆಡಳಿತ ಶಾಹಿ ಹೇಳಿತು. ಅದನ್ನು ಆತ ನಿರಾಕರಿಸಿ “ನನ್ನ ಸಾವಿನಿಂದ ನಾನು ಕಂಡ ಸತ್ಯ ಉಳಿಯಲಿ” ಎಂದು ತಾನೇ ಸ್ವಯಂ ವಿಷವನ್ನು ಸೇವಿಸುತ್ತಾನೆ.

ಈತನ ಹೆಸರು ಸಾಕ್ರೆಟಿಸ್‌;  ಕ್ರಿ.ಪೂ. 469-399 ರ ಅವಧಿಯಲ್ಲಿ ಗ್ರೀಸ್ ದೇಶದ ಅಥೆನ್ಸ್ ನಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವ ಜ್ಞಾನಿ. ಸತ್ಯವಾದಿ,ನಿಷ್ಟುರವಾದಿಯಾಗಿದ್ದ ಆತ, ಗ್ರೀಕ್ ಸಮಾಜ ವಿಷಮ ಘಟದಲ್ಲಿದ್ದಾಗ, ಅಲ್ಲಿನ ಅನೈತಿಕ, ಸ್ವೇಚ್ಛಾಚಾರದ ಜೀವನ ಕ್ರಮವನ್ನು  ಖಂಡಿಸಿ, ಒಂದು ಆರೋಗ್ಯಕರವಾದ ಸಮಾಜಕ್ಕಿರಬೇಕಾದ, ಗುಣ, ವಿಚಾರ, ಆಚಾರ, ದಿಕ್ಕು, ಧ್ಯೇಯಗಳನ್ನು ಗುರುತಿಸಿ ಸಾರಿದವನು. “ಆತ್ಮವಿಮರ್ಶೆವಿಲ್ಲದ ಅವೈಚಾರಿಕ ಜೀವನ ಕ್ರಮವು ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸ್ ಎಲ್ಲರಿಗೂ ಒಬ್ಬ ವಿಲಕ್ಷಣ ವ್ಯಕ್ತಿಯಂತೆ ಕಾಣುತ್ತಿದ್ದ; ತನ್ನ ಕಟು ವಿಮರ್ಶೆಯ ಮಾತುಗಳಿಂದ ದುರ್ಮಾರ್ಗದಲ್ಲಿದ್ದವರು ಯಾರೇ ಆಗಿರಲಿ, ಎಂಥಾ ಪ್ರಭಾವಿ ರಾಜಕೀಯ ನಾಯಕರಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸದೆ ಇರುತ್ತಿರಲಿಲ್ಲ. ಆತ ನಿರ್ಭೀಡೆಯಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಸಮಾಜದ ಮೌಡ್ಯವನ್ನು ದಾಕ್ಷಿಣ್ಯವಿಲ್ಲದೆ ತನ್ನ ಪ್ರಖರ ವಿಚಾರಗಳಿಂದ ಬಯಲಿಗೆಳೆಯುತ್ತಿದ್ದ.

ಸಾಕ್ರೆಟಿಸ್ ಧಾರ್ಮಿಕ ವ್ಯಕ್ತಿಯಲ್ಲದಿದ್ದರೂ ಧರ್ಮದ ವಿರುದ್ಧ ಒಡಕು ಮಾತುಗಳನ್ನಾಡುತ್ತಿರಲಿಲ್ಲ. ಅಥೆನ್ಸ್ ನ ನಗರದ ದೇವತೆಗಳಿಗೆ ಕೇವಲ ಸೌಜನ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದ, ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಬಾಹ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ‘‘ನಿನ್ನನ್ನು ನೀನು ತಿಳಿ’’ ಎಂಬುದು ಅವನ ನಂಬಿಕೆಯಾಗಿತ್ತು. ಎಲ್ಲಾ ಅಧ್ಯಯನಗಳಿಗಿಂತ ಮನುಷ್ಯನ ಕುರಿತ ಅಧ್ಯಯನ ಮತ್ತು ಸಮಾಜದಲ್ಲಿ ಅವನು ಹೇಗೆ ಬಾಳಬೇಕೆಂದು ತಿಳಿಯುವುದೇ ಅತ್ಯಂತ ಮಹತ್ವದ ಅಧ್ಯಯನವೆಂದು ಅವನು ಸಾರಿದನು. ಟೀಕೆಗೊಳಗಾದ ಬದುಕು, ಬದುಕಲು ಯೋಗ್ಯವಲ್ಲ ಎಂದನು. ಧಾರ್ಮಿಕತೆಯೇ ಇಲ್ಲದೆ ನೀತಿವಂತಿಕೆ ಸಾಧ್ಯವಿಲ್ಲವೆ?  ಎಂದು ಸಾಕ್ರೆಟಿಸ್ ಪ್ರಶ್ನಿಸಿದನು. ದೇವರ ಕಲ್ಪನೆಯೇ ಇರದೆ ನೈತಿಕತೆ ಇರಲು ಸಾಧ್ಯವಿಲ್ಲವೇ? ಎಂದು ಕೇಳಿದನು. ಧರ್ಮಮುಕ್ತ, ನೈತಿಕ ಸಂಹಿತೆಯುಕ್ತ ನಾಗರಿಕತೆಯ ಚಿಂತನಾ ಸ್ವಾತಂತ್ರ್ಯವನ್ನು ಉಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದನು. ಜ್ಞಾನವೇ ಅತ್ಯುತ್ತಮ ಮತ್ತು ಅಜ್ಞಾನವೇ ವ್ಯಸನವೆಂದನು. ಅತ್ಯುತ್ತಮವಾದದ್ದೆ ಸಂತೋಷ. ಅದಕ್ಕೆ ಮೂಲವೇ ಜ್ಞಾನ ಎಂಬುದು ಅವನ ನಂಬಿಕೆಯಾಗಿತ್ತು.

ಸಾಕ್ರೆಟಿಸ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಶ್ರೀಮಂತ ಪ್ರಭುತ್ವವನ್ನು (ಅರಿಸ್ಟೋಕ್ರಸಿ) ಪ್ರತಿಪಾದಿಸಿದನು. ಜ್ಞಾನ ಮತ್ತು ದಕ್ಷತೆ ಮಾತ್ರ ಅಥೆನ್ಸ್‌ನ ಸರ್ಕಾರವನ್ನು ಉಳಿಸೀತು ಎಂದನು. ಪ್ರಶ್ನಿಸದೆ ಏನನ್ನು ಸ್ವೀಕರಿಸದಿರುವಂತೆ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ತಿಳಿಸಿದನು. ಇಷ್ಟಾದರೂ ಅಥೆನ್ಸ್‌ನ ಬಹುಸಂಖ್ಯಾತರಿಗೆ ಅವನ ವಿಚಾರಗಳು ಕಿರಿಕಿರಿಯುಂಟು ಮಾಡಿದವು.  ನೈತಿಕತೆಯನ್ನು ಧರ್ಮದಲ್ಲಿ ಬಿಟ್ಟು  ಮನಸಾಕ್ಷಿಯಲ್ಲಿ ಹುಡುಕುವಂತೆ ಅವನು ಹೇಳಿದ್ದು ಅನೇಕರನ್ನು ರೇಗಿಸಿತು. ಇದರಿಂದ ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾಗುತ್ತಾನೆ. ಸಮಾಜದ ಜನರನ್ನು ಧರ್ಮವಿರೋಧಿ ವಿಚಾರಗಳತ್ತ ಎಳೆದು  ದೇವರಲ್ಲಿನ ಜನರ ನಂಬಿಕೆಗಳನ್ನು ಮುರಿಯುತ್ತಿದ್ದಾನೆ ಎಂದು ಆಪಾದಿಸಲಾಗುತ್ತದೆ.

 ವಿಚಾರಣೆಯ ಸಂದರ್ಭದಲ್ಲಿ ಸಾಕ್ರೆಟಿಸ್ ಕೇಳಿದ ಒಂದೇ ಪ್ರಶ್ನೆಯೆಂದರೆ ‘‘ಸಮಾಜವನ್ನು ನಾನು ಭ್ರಷ್ಟಗೊಳಿಸಿರುವೆನೆಂದು ಹೇಳುವುದಾದರೆ ನನ್ನನ್ನು ಭ್ರಷ್ಟಗೊಳಿಸಿದವರು ಯಾರು’’? ಕಾರಾಗೃಹದಲ್ಲಿದ್ದಾಗ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವನು ಹಾಗೆ ಮಾಡಲಿಲ್ಲ. ಕಾರಣ ಸಾಕ್ರೆಟಿಸ್ ತನ್ನ ತತ್ವಗಳಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದು ಮಾತ್ರವಲ್ಲದೆ ಅಮೋಘ ನೈತಿಕ ಶಕ್ತಿಯನ್ನು ಹೊಂದಿದ್ದ. ಕೊನೆಗೆ ಅಂಜದೆ, ಅಳುಕದೆ, ದುಃಖಿಸದೆ, ತನ್ನ 70ನೇ ವಯಸ್ಸಿನಲ್ಲಿ, ಕಾರಾಗೃಹದಲ್ಲಿ  ತಾನೇ ಸ್ವಯಂ ಹೆಮ್ಲಾಕ್ ವಿಷವನ್ನು ಕುಡಿದು ಶಾಂತಿಯಿಂದಲೇ ಸಾವನ್ನು ಅಪ್ಪಿಕೊಂಡ.

ಹೀಗೆ ಸಾವನ್ನು ಅಪ್ಪಿಕೊಂಡ ಸಾಕ್ರಟೀಸ್ ಕುರಿತು ಜೂಲಿಯನ್ ಚಕ್ರವರ್ತಿ ಹೀಗೆ ಹೇಳುತ್ತಾನೆ “ಯುದ್ಧದಲ್ಲಿ ಸಾವಿರ ಸೈನಿಕರ ಜಯಿಸಿದ ವೀರನಲ್ಲ ಸಾಕ್ರೆಟಿಸ್‌;  ಆತ ತನ್ನನ್ನು ತಾನು ಗೆದ್ದ ಋಷಿ; ಸಾಫ್ರೊನಿಸ್ಕನ್ಸಿನ ಮಗನಾದ ಸಾಕ್ರಟೀಸ್ ಅಲೆಕ್ಸಾಂಡರನಿಗಿಂತ ಮಹತ್ವದ ಸಾಧನೆ ಮಾಡಿದ್ದಾನೆ”.

ಇಂದಿಗೂ ಭಿನ್ನ ಆಶಯಗಳನ್ನೊತ್ತ ಧರ್ಮಗಳು ಜನರ ರಕ್ತವನ್ನು ಹಿಂಡುತ್ತಿವೆ. ಭಾರತದಲ್ಲಿ ಧರ್ಮವೊಂದು ಹರಿಯೇ ಸರ್ವೋತ್ತಮನು; ಹರಿಯಲ್ಲದೆ ಬೇರೆ ದೇವರು ಉತ್ತಮನೆಂದರೆ ಅಥವ ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು – ಎಂದು ಹೇಳಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ; ಸ್ತ್ರೀ, ಶೂದ್ರರಿಗೆ ವೇದಾಧಿಕಾರವಿಲ್ಲ ವೆಂದು ಹೇಳಿದರೆ, ಮತ್ತೊಂದು ಅಲ್ಲಾಹುವಲ್ಲದೆ ಬೇರೆ ದೇವರಿಲ್ಲ, ಪ್ರವಾದಿ ಮಹಮ್ಮದರು ಅಲ್ಲಾಹುವಿನ ಕಟ್ಟ ಕಡೆಯ ಪ್ರವಾದಿ. ಅಲ್ಲಾಹುವನ್ನು ಆರಾಧಿಸುವವರು ಮಾತ್ರ ಸ್ವರ್ಗಕ್ಕೆ ಅರ್ಹರು; ಬೇರೆ ದೇವರುಗಳನ್ನು ಆರಾಧಿಸುವವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಸಾರುತ್ತದೆ. ಪರಸ್ಪರ ವಿರುದ್ಧವಾಗಿರುವ ಧರ್ಮಗಳ ಈ  ಗೊಂದಲದಲ್ಲಿ ಸಿಕ್ಕ ಅಮಾಯಕ ಜನರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರಿಯಲಾಗದೆ, ನಿರ್ಧರಿಸಲಾಗದೆ ಹೋಗಿದ್ದಾರೆ. ಅಸಲಿಗೆ ಈ ದೇವರು, ಆ ಸ್ವರ್ಗ, ನರಕಗಳು ಇವೆಯೋ ಇಲ್ಲವೋ, ಅಂತೂ ಇಂಥ ಧರ್ಮಗಳು ಜನರನ್ನು ತಮ್ಮದಲ್ಲದ ತಪ್ಪಿಗೆ ಇಲ್ಲಿಯೇ ನರಕಕ್ಕೆ ತಳ್ಳುತ್ತಿವೆ.

ಜನರ ಒಳಿತಿಗಾಗಿ ಹುಟ್ಟಿದ ಧರ್ಮಗಳು ತಮ್ಮ ಉಳಿವಿಗಾಗಿ, ವಿಚಾರ ಶೀಲತೆಯನ್ನು ಕೊಂದು, ವಿಚಾರ ಮಾಡುವುದೇ ಮಹಾಪಾಪವೆಂಬ ಮೌಢ್ಯವನ್ನು ಬಿತ್ತಿ, ತನ್ನ ವಿರುದ್ಧ ನಿಲ್ಲುವ ಪ್ರತಿ ಪ್ರಗತಿಪರ ವಿಚಾರವನ್ನು, ವೈಜ್ಞಾನಿಕ ಸತ್ಯವನ್ನು ಹತ್ತಿಕ್ಕಿ, ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸತ್ಯವನ್ನು ಹೇಳಿದವನನ್ನೇ ಜೀವಂತ ಸುಟ್ಟಿವೆ. ಆ ಕಾಲದಿಂದ ಮೊನ್ನೆಯ ಪೆಶಾವರದ ಮಕ್ಕಳ ಮಾರಣ ಹೋಮದವರೆಗೂ ಧರ್ಮವು ಅದೆಷ್ಟೋ ಅಮಾಯಕರನ್ನು, ತತ್ವಜ್ಞಾನಿಗಳನ್ನು ತನ್ನ ಉಳಿವಿಗಾಗಿ ಬಲಿತೆಗೆದು ಕೊಂಡಿದೆ.

ಇನ್ನೆಷ್ಟು ದಿನ ಈ ಅಟ್ಟಹಾಸವನ್ನು ಜಗತ್ತು ಸಹಿಸಬೇಕು?

Advertisements

ಶೈಲೇಂದ್ರನೆಂಬ ಮಾಂತ್ರಿಕ

1947 ರ ಪೂರ್ವಾರ್ಧ; ಸ್ವಾತಂತ್ರ್ಯ ಆಂದೋಲನ ಉತ್ತುಂಗಕ್ಕೇರಿದ್ದ ಸಮಯ; ಅಂದಿನ ಬಾಂಬೆಯ ಒಂದು ಜನನಿಬಿಡ ಸ್ಥಳವೊಂದರಲ್ಲಿ ಸ್ವಾತಂತ್ರ್ಯ ಆಂದೋಲನದ ಒಂದು ಸಾರ್ವಜನಿಕ ಸಭೆಯಲ್ಲಿ ಆವೇಶಭರಿತ ಭಾಷಣಗಳ ನಡುವೆ ಒಬ್ಬ 24 ರ ಉತ್ಸಾಹಿ ತರುಣನೊಬ್ಬ ‘ಜಲ್ತಾಹೆ ಪಂಜಾಬ್’ (ಹೊತ್ತಿ ಉರಿಯುವ ಪಂಜಾಬ್) ಎಂಬ ತನ್ನ ಕವಿತೆಯೊಂದನ್ನು ಓದಲು ತೊಡಗುತ್ತಾನೆ. ಭಾರತ ವಿಭಜನೆಯ ಹೊಸಿಲಲ್ಲಿ ಇಬ್ಭಾಗವಾಗಿ ಹೋಗುವ ಪಂಜಾಬ್ ಹೊತ್ತಿ ಉರಿಯುವುದರ ಸಂಕಟವನ್ನು ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಬರೆದ ಕವಿತೆಯನ್ನು ಓದಿ ಮುಗಿಸಿದ ಕ್ಷಣದಲ್ಲಿ ಮತ್ತೋರ್ವ ಯುವಕ ಈ ಯುವ ಕವಿಯೆಡೆಗೆ ಬಂದು ಆತ್ಮೀಯ ಭಾವದಲ್ಲಿ, ಕವಿತೆಯನ್ನು, ಅದನ್ನು ಬರೆದ ಈ ಕವಿಯನ್ನು ಶ್ಲಾಘಿಸುತ್ತಾ, ತಾನು ಖ್ಯಾತ ಸಿನಿಮಾ ನಟ, ನಿರ್ಮಾತೃ  ಪೃಥ್ವಿರಾಜ್ ಕಪೂರ್ ರವರ ಪುತ್ರ, ರಾಜ್ ಕಪೂರ್ ಎಂದು ಪರಿಚಯಮಾಡಿಕೊಳ್ಳುತ್ತಾನೆ. ಚಿತ್ರೀಕರಣಗೊಳ್ಳುತ್ತಿರುವ ತನ್ನ ಸಿನಿಮಾ ‘ಆಗ್’ ನ ಹಾಡಿಗೆ ಈ ಕವಿತೆಯು ಹೇಳಿ ಮಾಡಿಸಿದಂತಿದ್ದು ಅದನ್ನು ತಾನು ಖರೀದಿಸಲು ಉತ್ಸುಕನಾಗಿರುವುದಾಗಿ ಹೇಳುತ್ತಾನೆ.  ತಮ್ಮ ಹಾಡುಗಳನ್ನು, ಕಥೆಗಳನ್ನು ಚಿತ್ರ ನಿರ್ಮಾಪಕರ ಬಾಗಿಲಿಗೆ ಒಯ್ದು ಅಲೆದಾಡುವ ಜನರನ್ನು ಕಾಣುತ್ತಿದ್ದ ರಾಜ್ ಕಪೂರ್ ಗೆ ತನ್ನ ಪ್ರಸ್ತಾವನೆಯನ್ನು ಈ ಯುವ ಕವಿ ಉತ್ಸಾಹ, ಋಣಭಾವದಲ್ಲಿ ಸ್ವೀಕರಿಸಬಹುದೆಂಬ ದೃಢ ವಿಶ್ವಾಸದಲ್ಲಿ, ತನ್ನ ಅಹಂಕಾರವನ್ನು ಮೆರೆಯದೆ,  ಕೋಮಲವಾದ ಸೂಕ್ಷ್ಮ ಕವಿ ಹೃದಯಕ್ಕೆ ಧಕ್ಕೆ ತರದಂತೆ ತನ್ನೆಲ್ಲ ಸೌಜನ್ಯದಿಂದ ಕೇಳುತ್ತಾನೆ.  ಸ್ವಾತಂತ್ರ ಆಂದೋಲನದಲ್ಲಿ ಮುಳುಗಿ, ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಈ ಯುವ ಕವಿ ಆ ಕ್ಷಣ ವಿಚಲಿತನಾಗಿ  “ನನ್ನ ಈ ಕವಿತೆ ಮಾರಾಟಕ್ಕಿಲ್ಲ” ಎಂದು ಖಡಾತುಂಡವಾಗಿ ಆ ತರುಣನ ಮುಖಕ್ಕೆ ಹೊಡೆದಂತೆ ಹೇಳುತ್ತಾನೆ. ಇದರಿಂದ ಸ್ವಲ್ಪವೂ ಬೇಸರಗೊಳ್ಳದ ಆ ತರುಣ, ತನ್ನ ಜೇಬಿನಿಂದ ಕಾಗದದ ತುಂಡೊಂದನ್ನು ತೆಗೆದು ಅದರಲ್ಲಿ ತನ್ನ ಹೆಸರು ವಿಳಾಸವನ್ನು ಬರೆದು ಈ ಯುವ ಕವಿಗೆ ನೀಡುತ್ತಾ “ಮುಂದೊಂದು ದಿನ ನಿಮ್ಮ ನಿರ್ಧಾರ ಬದಲಾದರೆ, ನನ್ನನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದು”  ಎಂದು  ಹೇಳಿ ಹೋಗುತ್ತಾನೆ.

Shailendra 1ಬಿಹಾರ ಮೂಲದ ಕೇಸರಿಲಾಲ್- ಪಾರ್ವತಿದೇವಿ ತಮ್ಮ ಕುಟುಂಬದೊಂದಿಗೆ ಜೀವನಕ್ಕಾಗಿ ಇಂದಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಗೆ ವಲಸೆ ಹೋಗುತ್ತಾರೆ. ಅಲ್ಲಿ, ಅವರಿಗೆ 1923 ರ ಆಗಸ್ಟ್ 30 ರಂದು ಒಂದು ಗಂಡು ಮಗುವಿನ ಜನನವಾಗುತ್ತದೆ. ಆ ಮಗುವಿಗೆ ಶಂಕರ್ ದಾಸ್  ಎಂದು ನಾಮಕರಣ ಮಾಡುತ್ತಾರೆ.  ಈ ಮಗು ಬಾಲ್ಯಾವಸ್ತೆಯಲ್ಲಿರುವಾಗ ಈ ಕುಟುಂಬ ಇಂದಿನ ಮಥುರಾ ಪಟ್ಟಣಕ್ಕೆ ವಲಸೆ ಬರುತ್ತದೆ. ಶಂಕರ್ ದಾಸ್ ಇನ್ನೂ ಹದಿ ಹರೆಯದಲ್ಲಿರುವಾಗ ತನ್ನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇನ್ನೇನು ಬದುಕುವುದೇ ಕಷ್ಟವೆಂದು ತೋರಿದಾಗ ದೇವರಲ್ಲಿ ಮೊರೆ ಇಡುತ್ತಾನೆ; ಬರಿಗಾಲಿನಲ್ಲಿ ಮಥುರಾದ ಉರಿ ಬಿಸಿಲಿನಲ್ಲಿ ಎಲ್ಲ ದೇವಸ್ಥಾನಗಳಿಗೆ ಎಡತಾಕುತ್ತಾನೆ, ಪ್ರಾರ್ಥಿಸುತ್ತಾನೆ; ಕಡೆಗೆ ತಾಯಿ ಉಳಿಯುವುದಿಲ್ಲ; ದೇವರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ಅಲ್ಲಿಂದ ಮುಂದೆ ತನ್ನ ಇಡೀ ಜೀವನದಲ್ಲಿ ದೇವರನ್ನು ನಂಬದ ನಾಸ್ತಿಕನಾಗುತ್ತಾನೆ. ಕಷ್ಟ-ಕಾರ್ಪಣ್ಯದಲ್ಲಿ, ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಮಥುರಾದಲ್ಲಿ ಬೆಳೆದ ಈ ಹುಡುಗ, ಭಾಷೆ, ಸಂಸ್ಕೃತಿ, ಜೀವನದರ್ಶನವನ್ನೆಲ್ಲಾ ತನ್ನ ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳುತ್ತಾನೆ.  ಓದಿನ ನಡುವೆ ಆಗಾಗ ತನ್ನ ಜೀವನದ ಅನುಭವಗಳನ್ನು ಕವಿತೆಯ ರೂಪದಲ್ಲಿ ಬರೆಯಲಾರಂಭಿಸುತ್ತಾನೆ. ಅವನ ಗೆಳೆಯರು ಈತನ ಕವಿತೆಯನ್ನು ಮೆಚ್ಚುವಷ್ಟು ಪ್ರಬುದ್ಧರಾಗಿರಲಿಲ್ಲ. ಅವರೆಲ್ಲರೂ ಇವನನ್ನು ಅರ್ಥವಿಲ್ಲದ್ದನ್ನು ಗೀಚುವವನೆಂದು ಆಡಿಕೊಳ್ಳುತ್ತಿದ್ದರು. ಜೀವನ ನಿರ್ವಹಿಸುವುದು  ಕಷ್ಟವಾದ್ದರಿಂದ ಓದನ್ನು ಕೈಬಿಟ್ಟು ಭಾರತೀಯ ರೈಲ್ವೆಯಲ್ಲಿ ವೆಲ್ಡರನಾಗಿ ನೌಕರಿಗೆ ಸೇರಿ ತರಬೇತಿಗೆಂದು ಆಗ್ರಾ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ತನ್ನ ತರಬೇತಿಯ ನಡುವೆ ಈತ ಬರೆಯುತ್ತಿದ್ದ ಕವಿತೆಗೆ, ಈತನ ವ್ಯಕ್ತಿತ್ವಕ್ಕೆ ಮಾರುಹೋದ ಯುವತಿಯೊಬ್ಬಳು ಇವನ ಒಡನಾಟಕ್ಕೆ ಬೀಳುತ್ತಾಳೆ; ಅವಳಲ್ಲಿ ಇವನಿಗೆ ಪ್ರೇಮಾಂಕುರವಾಗುತ್ತದೆ. ಆದರೆ, ಬಡತನದಲ್ಲಿದ್ದ ಇವನ ಕುಟುಂಬವನ್ನು ಮತ್ತು   ಇದ್ದುದರಲ್ಲಿ ಸ್ಥಿತಿವಂತರಾದ ಆ ಯುವತಿಯ ಕುಟುಂಬವನ್ನು ಬೆಸೆಯುವ ಯಾವ ಸಮಾನ ಲಕ್ಷಣಗಳು ಇರಲಿಲ್ಲ.  ಈ ನಡುವೆ ಈ ಯುವತಿಯ ಅಕ್ಕನ ಮದುವೆಯು ಒಬ್ಬ ವೈದ್ಯ ವರನೊಂದಿಗೆ ನಿಗದಿಯಾಗುತ್ತದೆ. ಈ ಸಂಧರ್ಭದಲ್ಲಿ ಶಂಕರ್ ದಾಸ್  ಸ್ವಲ್ಪ ಧೈರ್ಯಮಾಡಿ ಆ ಯುವತಿಯ ತಂದೆಯನ್ನು ಭೇಟಿಮಾಡಿ ತನ್ನ ಮತ್ತು ಅವರ ಮಗಳ ನಡುವಿನ ಪ್ರೇಮದ ವಿಷಯ ಪ್ರಸ್ತಾಪ ಮಾಡಿ ಮದುವೆ ಮಾಡಿ ಕೊಡುವಂತೆ ಕೇಳುವ ಧೈರ್ಯ ಮಾಡುತ್ತಾನೆ. ಇವನ ಪ್ರಸ್ತಾಪವನ್ನು ಕೇಳಿ ಯುವತಿಯ ಕುಟುಂಬದವರು ಹೌಹಾರುತ್ತಾರೆ. ರೈಲ್ವೆಯ ಮೆಕ್ಯಾನಿಕ್ ಗೂ ಅವರಿಗೂ ಎಲ್ಲಿಯ ಸಾಟಿ!  ಆದರೆ, ಆ ಯುವತಿಯ ತಂದೆ ಈತನ ನೇರ, ಸರಳ ವ್ಯಕ್ತಿತ್ವ, ಈತನ ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳುತ್ತಾರೆ. ನೌಕರಿ ಸಣ್ಣದಾದರೂ ಪ್ರೀತಿಸಿದ ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವವನೆಂದು ಅವರಿಗೆ ತೋರುತ್ತದೆ; ಅವರ ಹಿರಿಯ ಮಗಳ ಮದುವೆಯೊಂದಿಗೆ ಇವರ ಮದುವೆಯನ್ನೂ ಆ ಯುವತಿಯ ತಂದೆ ಮಾಡುತ್ತಾರೆ. ತರಬೇತಿಯ ನಂತರ ಶಂಕರ್ ದಾಸ್ ಗೆ ಬಾಂಬೆಯ ರೈಲ್ವೆ ವರ್ಕ್ ಶಾಪಿಗೆ  ಪೋಸ್ಟಿಂಗ್ ಆಗುತ್ತದೆ.  ತನ್ನ ಪ್ರೀತಿಯ ಮಡದಿಯೊಂದಿಗೆ ಬಾಂಬೆಯಲ್ಲಿ ಒಂದು ಕೊಠಡಿಯ ಹಳೆಯ ಮನೆಯೊಂದರಲ್ಲಿ ಸಂಸಾರ  ಹೂಡುತ್ತಾನೆ. ಸಾಲದ ಸಂಬಳ, ಆಕಾಶದಷ್ಟು ಆಸೆಗಳು, ಕನಸುಗಳು ಕಣ್ಣಲ್ಲೇ ಕರಗಿ ಹೋಗುತ್ತಿದ್ದವು. ಒಂದೊಂದು ದಿನ ಇರುವ ಒಂದೇ ಆಲೂ ಗೆಡ್ಡೆಯನ್ನು ಮಧ್ಯಾನದ ಊಟಕ್ಕೆ ಬಳಸುವುದೋ ಅಥವ ರಾತ್ರಿಯೂಟಕ್ಕೋ ಎನ್ನುವಷ್ಟು ಬಡತನ. ಈತನಿಗೆ ಸಂಕಟ;  ಸುಖವಾಗಿ ಬೆಳೆದಿದ್ದ ತನ್ನ ಹೆಂಡತಿಗೆ ಒಂದು ಹೊತ್ತಿನ ಊಟವನ್ನೂ ಚೆನ್ನಾಗಿ ಕೊಡಲಾಗುತ್ತಿಲ್ಲವಲ್ಲ ಎಂಬ ಕೊರಗು, ಸಂಕಟ. ಇಂಥಹ ಸ್ಥಿತಿಯಲ್ಲಿ ಹೆಂಡತಿ ಗರ್ಭಿಣಿಯಾಗುತ್ತಾಳೆ; ಅವಳ ಪುಷ್ಠಿಗೆ ಒಳ್ಳೆಯಾ ಆಹಾರ ತಂದು ಕೊಡಲು, ಅತ್ತ ತವರಿಗೆ ಕಳುಹಿಸಲೂ ಕಿಸೆಯಲ್ಲಿ ಹಣವಿಲ್ಲ.   ಈ ಸ್ಥಿತಿಯಲ್ಲಿ ತನ್ನ ಕವಿತೆಯನ್ನು ಕೊಳ್ಳಲು ಬಂದಿದ್ದ ಅಂದಿನ ಪ್ರಸಿದ್ಧ ನಟ, ಸಿನಿಮಾ ನಿರ್ಮಾತೃ ಆಗಿದ್ದ ಪೃಥ್ವಿರಾಜ್ ಕಪೂರರ ಮಗನ ನೆನಪಾಗುತ್ತದೆ. ಅಂದು ಅವನು ಕೊಟ್ಟಿದ್ದ ಆ ಕಾಗದದ ತುಣುಕನ್ನು ಹುಡುಕುತ್ತಾನೆ; ಅದರಲ್ಲಿನ ವಿಳಾಸವನ್ನು ಹುಡುಕಿ ಆ ತರುಣನನ್ನು ಭೇಟಿಮಾಡಿ ಈಗ ತನಗೆ ಹಣದ ಅವಶ್ಯಕತೆ ಇರುವುದಾಗಿಯೂ, ತುರ್ತಾಗಿ ಐದುನೂರು ರೂಪಾಯಿ ಕೊಟ್ಟರೆ ಕಂತುಗಳಲ್ಲಿ ಅದನ್ನು ಹಿಂತಿರುಗಿಸುವುದಾಗಿ ಹೇಳುತ್ತಾನೆ. ರಾಜ್ ಕಪೂರ್ ಕೂಡಲೆ ಐದುನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸುತ್ತಾನೆ. ಒಂದು ದಿನ ಪಡೆದ ಹಣವನ್ನು ಹಿಂದಿರುಗಿಸಲು ಶಂಕರ್ ದಾಸ್, ರಾಜ್ ಕಪೂರ್ ಬಳಿ ಬಂದಾಗ ಪ್ರೀತಿಯಿಂದ ಅದನ್ನು ವಾಪಾಸು ಶಂಕರ್ ದಾಸ್ ಕಿಸೆಗಿಟ್ಟು  ‘ಬರ್ಸಾತ್’ ಎಂಬ ತನ್ನದೊಂದು ಸಿನಿಮಾ ಚಿತ್ರೀಕರಣವಾಗುತ್ತಿದೆ ಅದಕ್ಕೆ ಹಾಡು ಬರೆದು ಕೊಡುವಂತೆ ರಾಜ್ ಕಪೂರ್ ಹೇಳುತ್ತಾನೆ. ಅಷ್ಟೊತ್ತಿಗೆ ಆ ಚಿತ್ರಕ್ಕೆ ಖ್ಯಾತ ಗೀತಕಾರರಾದ ಹಜರತ್ ಜಯಪುರಿಯವರಿಂದ ಆರು, ಜಲಾಲ್ ಮಲಿಹಾಬಾದಿಯವರಿಂದ ಒಂದು, ರಮೇಶ್ ಶಾಸ್ತ್ರಿಯವರಿಂದ ಒಂದು ಮತ್ತು ಶಂಕರ್ ಜೈಕಿಶನ್ ರವರಿಂದ ಒಂದು, ಒಟ್ಟು ಒಂಭತ್ತು ಹಾಡುಗಳನ್ನು ಬರೆಸಿ ಅಂದಿನ ಖ್ಯಾತ ಸಂಗೀತ ನಿರ್ದೇಶಕ ಜೋಡಿ ಶಂಕರ-ಜೈಕಿಶನರಿಂದ ಸಂಗೀತ ಸಂಯೋಜನೆ ಮಾಡಿಸಲಾಗಿರುತ್ತದೆ.  ಆದಾಗ್ಯೂ, ಶಂಕರ್ ದಾಸ್ ನ ಪಾಂಡಿತ್ಯದಿಂದ ಅದೆಂತಹ ಹಾಡು ಹೊಮ್ಮ ಬಹುದೆಂಬ ಕುತೂಹಲಕ್ಕೆ ಮತ್ತೆರಡು ಹಾಡುಗಳನ್ನು ಬರೆಯುವಂತೆ ರಾಜ್ ಕಪೂರ್ ಹೇಳುತ್ತಾನೆ. ‘ಶೈಲೇಂದ್ರ’ ಎಂಬ ಕಾವ್ಯನಾಮದಲ್ಲಿ ಆಗ ಬರೆದದ್ದೇ “ ಬರ್ಸಾತ್ ಮೆ.. ಹಮ್ ಸೆ ಮಿಲೆ ತುಮ್”.  ಮತ್ತು  “ಪತಲಿ ಕಮರ್ ಹೈ”  ಎಂಬ  ಎರಡು ಹಾಡುಗಳು.  ಬರ್ಸಾತ್ ಮೆ ಹಮ್ ಸೆ ಮಿಲೆ ತುಮ್   ಹಾಡಿನ ಸರಳ ಸುಂದರ ಸಾಲುಗಳು ಪ್ರೇಮಿಗಳ ಹೃದಯದ ಮಿಡಿತವನ್ನು ಅಷ್ಟು ಗಾಢವಾಗಿ ಹಿಡಿದಿಟ್ಟಿದ್ದು ತುಂಬ ರೊಮ್ಯಾಂಟಿಕ್ ಆದ ರಾಜ್ ಕಪೂರನನ್ನು ಆ ಕ್ಷಣ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಅಲ್ಲಿಯವರೆಗೂ ಉರ್ದು ಶಾಯರಿಯುಕ್ತ ಘಜಲ್ ಗಳಿಂದ ಪ್ರೇರಿತವಾದ ಗೀತೆಗಳನ್ನು ಕೇಳಿದ್ದ ರಾಜ್ ಕಪೂರ್ ಗೆ ಈ ಸರಳ ಸುಂದರ ಸಾಲುಗಳು ಮೋಹಕವಾಗಿ ಕಾಣುತ್ತವೆ;  ಆಗ ಶಂಕರ್ ದಾಸ್ ನನ್ನು ಅಪ್ಪಿ, ಇನ್ನು ಮುಂದೆ ತನ್ನೆಲ್ಲ ಸಿನಿಮಾಗಳಿಗೆ ನೀನು ಹಾಡುಗಳನ್ನು ಬರೆಯಬೇಕೆಂದು ಹೇಳಿ ತನ್ನ ಪ್ರೊಡಕ್ಷನ್ ಕಂಪನಿಯಲ್ಲಿ ತಿಂಗಳಿಗೆ ಐದು ನೂರು ರೂಪಾಯಿಗಳ ಸಂಬಳಕ್ಕೆ ಶಂಕರ್ ದಾಸ್ ನನ್ನು ಒಪ್ಪಿಸುತ್ತಾನೆ.  ಆ ಹಾಡು ಆ ಚಿತ್ರದ ಟೈಟಲ್ ಸಾಂಗ್ ಆಯ್ತು.  ಮುಂದೆ ಬರ್ಸಾತ್ ಸಿನಿಮಾ ಬಿಡುಗಡೆಯಾಗಿ ಅದ್ಭುತವಾದ  ಯಶಸ್ಸು ಕಂಡಿತು. ಎಲ್ಲರ ಬಾಯಲ್ಲಿ ಇದೇ ಹಾಡು; ಇಷ್ಟು ಸರಳವಾದ ಪದಗಳಲ್ಲಿ  ಭಾವಗಳನ್ನು ಮನ ಮುಟ್ಟುವಂತೆ ಬರೆದವರು ಯಾರು ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು.  ಯಾರು ಈ ಶೈಲೇಂದ್ರ  ಎಂದು ಎಲ್ಲರೂ ಕೇಳುವಂತಾಯಿತು. ಅಲ್ಲಿಂದ ಶೈಲೇಂದ್ರ ಖ್ಯಾತಿವೆತ್ತ  ಗೀತಕಾರರಾದರು.

Raj Kapoor ShailendraRaj Kapoor Shailendra2

ಒಮ್ಮೆ ರಾಜ್ ಕಪೂರ್ ಶೈಲೇಂದ್ರರನ್ನು ಒಂದು ಕಥೆಯನ್ನು ಕೇಳುವ ಸಲುವಾಗಿ ಕೆ.ಎ.ಅಬ್ಬಾಸ್ ರವರ ಬಳಿ ಕರೆದುಕೊಂಡು ಹೋಗುತ್ತಾರೆ. ಈತ ಯಾರೊ ಹೊಸಬ ಎಂದು ಅಬ್ಬಾಸ್ ಶೈಲೇಂದ್ರರನ್ನು ಕಡೆಗಣಿಸಿ ರಾಜ್ ಕಪೂರ್ ಗೆ ಎರಡೂವರೆ ಗಂಟೆಗಳ ವರೆಗೆ ಕಥೆ ಹೇಳುತ್ತಾ ಹೋಗುತ್ತಾರೆ; ಕೊನೆಯಲ್ಲಿ ರಾಜ್ ಕಪೂರ್ ಏನಾದ್ರೂ ಅರ್ಥ ಆಯ್ತಾ ಎಂದು ಶೈಲೇಂದ್ರರನ್ನು ಕೇಳುತ್ತಾರೆ; ಅದಕ್ಕೆ ಶೈಲೇಂದ್ರರು ಹೌದು, “ಅಲೆಮಾರಿಯಂತೆ ತಿರುಗುವ ಹುಚ್ಚನಾಗಿದ್ದ, ಆದ್ರೆ ಆಕಾಶದ ತಾರೆಯಾಗಿದ್ದ…” (ಗರ್ದಿಷ್ ಮೆ ಥಾ, ಪರ್ ಆಸ್ಮಾನ್ ಕಾ ತಾರಾ ತಾ, ಅವಾರಾ ಥಾ…) ಇದನ್ನು ಕೇಳಿ ಅಬ್ಬಾಸ್ ಅವಾಕ್ಕಾದರು!  ತನ್ನ ಎರಡೂವರೆ ಗಂಟೆಗಳ ಕಥೆಯನ್ನು ಒಂದು ಸಾಲಿನಲ್ಲಿ ಹೇಳಿದ ಈತ ಯಾರು ಎಂದು ಅವರಿಗೆ ಅಚ್ಚರಿಯಾಯಿತು. ಮುಂದೆ ಆ ಚಿತ್ರಕ್ಕೇ ಶೈಲೇಂದ್ರರು ಇದೇ ಸಾಲನ್ನು ಮುಂದುವರಿಸಿ “ ಯಾ ಗರ್ದಿಷ್ ಮೆ ಹ್ಞೂಂ, ಆಸ್ ಮಾನ್ ಕಾ ತಾರಾ ಹ್ಞೂಂ, ಆ್ಞವಾರಾ.. ಹ್ಞೂಂ..” ಎಂಬ ಪ್ರಸಿದ್ದವಾದ ಹಾಡನ್ನು ‘ಆ್ಞವಾರಾ’ ಚಿತ್ರಕ್ಕೆ ಬರೆದರು.   ಈ ಮೂವರು, ಮುಂದೆ ಶಂಕರ್-ಜೈಕಿಶನ್ ಜೊಡಿಯ ಜೊತೆ ಸೇರಿ ಹಿಂದಿ ಚಿತ್ರರಂಗದ ದಾಖಲೆಯ ಚಿತ್ರಗಳನ್ನು ನಿರ್ಮಿಸಿದರು.

Shailendra with his family ಬರ್ಸಾತ್ ಮತ್ತು ಆ್ಞವಾರಾ ಚಿತ್ರಗಳನಂತರ ಶೈಲೇಂದ್ರ ಬಹು ಬೇಡಿಕೆಯ ಗೀತಕಾರರಾದರು; ಇತರೆ ನಿರ್ಮಾಪಕರು ಇವರ ಬಾಗಿಲು ತಟ್ಟಲಾರಂಭಿಸಿದರು. ಶೈಲೇಂದ್ರರು ಉತ್ತುಂಗದಲ್ಲಿದ್ದಾಗ ಆನಂದ್ ಸಹೋದರರಾದ ದೇವರ ಆನಂದ್ ಮತ್ತು ವಿಜಯ್ ಆನಂದ್ ಆರ್.ಕೆ.ನಾರಾಯಣ್ ರ ‘ದ ಗೈಡ್’ ಅನ್ನು ಸಿನಿಮಾ ಮಾಡುವ ಯೋಜನೆಯಲ್ಲಿ ಅಂದಿನ ಗೀತಕಾರರಾದ  ಹಝರತ್ ಜೈಪುರಿ ಯವರನ್ನು ಗೊತ್ತುಪಡಿಸಿರುತ್ತಾರೆ; ಆದರೆ ಅವರ ಶಾಯರಿ ಶೈಲಿಯ ಗೀತೆಗಳು ತಮ್ಮ  ಗೈಡ್ ಸಿನಿಮಾಕ್ಕೆ ಹೊಂದುವುದಿಲ್ಲ ಎಂದು ಆನಂದ್ ಸಹೋದರರಿಗೆ ಅನಿಸುತ್ತದೆ. ಜನ ಸಾಮಾನ್ಯರ ಬಾಯಲ್ಲಿ ಹರಿದಾಡುವ ಸರಳ ಪದಗಳಲ್ಲಿ ಗಹನವಾದ ಜೀವನಸಾರ ಅಡಗಿರುವ ಗೀತೆಗಳು ಅವರಿಗೆ ಬೇಕಾಗಿತ್ತು. ಅಂದು ಇಂತಹ ಗೀತೆಗಳನ್ನು ಶೈಲೇಂದ್ರ ಮಾತ್ರ ಬರೆಯುತ್ತಿದ್ದರು. ಹಝರತ್ ಜೈಪುರಿಯವರ ಗೀತೆಗಳನ್ನು ಬದಿಗೊತ್ತಿ ಶೈಲೇಂದ್ರರನ್ನು ಸಂಪರ್ಕಿಸಿ ತಮ್ಮ ಗೈಡ್ ಸಿನಿಮಾಕ್ಕೆ ಗೀತೆಗಳನ್ನು ಬರೆಯುವಂತೆ ಕೇಳುತ್ತಾರೆ.  ಸೂಕ್ಷ್ಮ ಮನಸ್ಸಿನ ಸ್ವಾಭಿಮಾನಿಯಾದ ಶೈಲೇಂದ್ರರಿಗೆ ಅವರ ಪ್ರಸ್ತಾವನೆ ಮತ್ತು ಅದರ ಹಿಂದಿನ ಯೋಚನೆ ತಮ್ಮ ಗೌರವಕ್ಕೆ ಶೋಭೆ ತರುವಂಥದ್ದಲ್ಲ ಎಂದು ತೋರುತ್ತದೆ. ಅವರ ಈ ಪ್ರಸ್ತಾವನೆಯನ್ನು ಅವರಿಗೆ ನೋವಾಗದ ರೀತಿಯಲ್ಲಿ ಹೇಗೆ ನಿರಾಕರಿಸುವುದು ಎಂಬ ಗೋಜಿಗೆ ಬೀಳುತ್ತಾರೆ. ಕೊನೆಗೆ ಕಲ್ಪನೆಗೂ ಮೀರಿದ ಸಂಭಾವನೆಯನ್ನು ಕೇಳಿದರೆ ಆನಂದ್ ಸಹೋದರರು ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರದಲ್ಲಿ ಅರವತ್ತರ ದಶಕದಲ್ಲಿ ಕಂಡು ಕೇಳಿರದ ಸಂಭಾವನೆಯನ್ನು ಕೇಳುತ್ತಾರೆ! ಅಂದಿನ ದಿನಗಳಲ್ಲಿ ಚಿತ್ರದಲ್ಲಿನ ಹಾಡುಗಳೇ ಚಿತ್ರವನ್ನು ಯಶಸ್ಸಿಗೆ ಒಯ್ಯುತ್ತಿದ್ದವು; ಒಂದೊಂದು ಚಿತ್ರದಲ್ಲಿ ಎಂಟರಿಂದ ಹತ್ತು ಹಾಡುಗಳಿರುತ್ತಿದ್ದವು. ಆನಂದ್ ಸಹೋದರರು ಒಮ್ಮೆ ಯೋಚಿಸಿ ತಮ್ಮ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಅಷ್ಟು ಹಣವನ್ನು ಚಿತ್ರದ ಗೀತೆಗಳಿಗೆ ವ್ಯಯಿಸುವುದು ಹೆಚ್ಚಾಗಲಾರದೆಂದು ಎಣಿಸಿ ಶೈಲೇಂದ್ರರು ಸೂಚಿಸಿದ ಸಂಭಾವನನೆಯನ್ನು ಒಪ್ಪಿಕೊಳ್ಳುತ್ತಾರೆ. ಅಂದು ಶೈಲೇಂದ್ರರು ಕೇಳಿದ ಸಂಭಾವನೆಯನ್ನು ಇಂದಿನ ಮೌಲ್ಯಕ್ಕೆ ಪರಿವರ್ತಿಸಿದರೆ ಇಂದಿನ ಯಾವ ಖ್ಯಾತ ಗೀತಕಾರರೂ ಅಷ್ಟೊಂದು ಸಂಭಾವನೆ ಕೇಳುವ ಮನಸ್ಸು ಮಾಡುವುದಿರಲಿ, ಕನಸ್ಸಿನಲ್ಲಿಯೂ ಎಣಿಸಲಾರರು; ಅಂದು ಪ್ರತಿ ಗೀತೆಗೆ ಅವರು ಕೇಳಿದ ಸಂಭಾವನೆ ಹತ್ತು ಸಾವಿರ ರೂಪಾಯಿಗಳು!. ಮುಂದೆ ಅದೇ ಶೈಲೇಂದ್ರರ ಸಂಭಾವನೆಯ ಮಾನದಂಡವಾಯಿತು; ಆದರೆ ತನ್ನ ಬದುಕಿಗೆ ತಿರುವು ಕೊಟ್ಟ ರಾಜ್ ಕಪೂರರ ಚಿತ್ರಗಳಿಗೆ ಮಾತ್ರ ಶೈಲೇಂದ್ರರು ಕೇವಲ ಐದು ನೂರು ರೂಪಾಯಿಗಳ ಮಾಸಿಕ ಸಂಬಳ ಪಡೆಯುತ್ತಿದ್ದರು. ಅಲ್ಲಿಂದ ಮುಂದೆ ಎಲ್ಲ ಖ್ಯಾತ ಬ್ಯಾನರ್ ಗಳ ಚಿತ್ರಗಳಲ್ಲಿ ಶೈಲೇಂದ್ರರ ಗೀತೆಗಳಿರುತ್ತಿದ್ದವು. ಅವರಿಗೆ ಚಿತ್ರರಂಗದಲ್ಲಿ ತಾರೆಯ ಪಟ್ಟ ದೊರೆತಿತ್ತು. ಅವರ ಊಹೆಗೆ ಮೀರಿ ಹಣ, ಖ್ಯಾತಿ ಅವರನ್ನು ಅರಸಿ ಬಂತು. ಮುಂಬೈನಲ್ಲಿ ಬಂಗಲೆಯನ್ನು ಖರೀದಿಸಿ ಅದಕ್ಕೆ’ರಿಮ್ ಜಿಮ್’ ಎಂದು ಹೆಸರಿಡುತ್ತಾರೆ; ಮನೆಯ ತುಂಬ ಆಳು ಕಾಳು, ಮಕ್ಕಳಿಗೆಲ್ಲ ಯುರೋಪಿಯನ್ ಶಿಕ್ಷಣ; ಅವರ ಮನೆಯ ವೈಭವ ಮುಂಬೈನ ಯಾವ ಸಿನಿಮಾ ತಾರೆಯ ಮನೆಗೂ ಕಡಿಮೆ ಇರಲಿಲ್ಲ. ಅವರ ಮಗಳು ಅಮಲಾ ಮಜುಮ್ದಾರ್ ಹೇಳುವಂತೆ ಐಶ್ವರ್ಯ ಮತ್ತು ಖ್ಯಾತಿ ಅವರನ್ನು ಎಂದೂ ಬದಲಾಯಿಸಲಿಲ್ಲ. ಒಮ್ಮೆ ಅಮಲಾ ತನ್ನ ಬಾಲ್ಯದಲ್ಲಿ ಶಾಲೆಯಿಂದ ಮನೆಗೆ ಬರುವಾಗ ತನ್ನ ಪುಸ್ತಕಗಳನ್ನು ಮನೆಯ ಸೇವಕ ಹೊತ್ತು ತರುವಂತೆ ಮಾಡಿದ್ದಕ್ಕೆ ಆಕ್ಷೇಪಿಸಿ ಮುಂದೆ ಹಾಗೆ ಮಾಡದಂತೆ ತಾಕೀತು ಮಾಡಿದ್ದರಂತೆ.

teesri kasam Wahida raj5 teesri kasam Wahida raj

ಈ ನಡುವೆ ಒಂದು ಶ್ರೇಷ್ಠ ಚಿತ್ರ ನಿರ್ಮಿಸುವ ಯೋಚನೆ ಮಾಡುತ್ತಾರೆ; ಆಗ ಅವರ ಕಣ್ಣಿಗೆ ಫಾಣೀಶ್ವರ್ ನಾಥರ ‘ಮಾರೆ ಗಯೆ ಗುಲ್ಫಂ’ ಕೃತಿ ಬೀಳುತ್ತದೆ. ಅದೊಂದು ಊರಿಂದೂರಿಗೆ ಹೋಗಿ ನಾಟಕ, ನೃತ್ಯ ಮಾಡುವ ಹೆಣ್ಣುಮಕ್ಕಳು ಎದುರಿಸುವ ಶೋಷಣೆ, ಪಡುವ ಪಾಡು, ಅನುಭವಿಸುವ ಕಷ್ಟ-ಕೋಟಲೆಗಳ ಅನಾವರಣ ಮಾಡುವ ಕಥೆ. ಅದಕ್ಕೆ ‘ತೀಸ್ರೀ ಕಸಮ್’ ಎಂದು ಹೆಸರಿಟ್ಟು,  ಚಿತ್ರಕಥೆಯನ್ನು ಬಿಮಲ್ ರಾಯ್ ರ ದೇವದಾಸ್, ಸುಜಾತಾ ಮತ್ತು ಬಂದಿನಿ ಚಿತ್ರಗಳಿಗೆ ಚಿತ್ರ ಕಥೆಯನ್ನು ಬರೆದ ನಬೆಂದು ಘೋಷ್ ರ ಕೈಯ್ಯಲ್ಲಿ ಬರೆಸುತ್ತಾರೆ;  ಸಂಭಾಷಣೆಯನ್ನು ಮೂಲ ಲೇಖಕರಾದ ಫಾಣೀಶ್ವರ್ ನಾಥರಿಂದಲೇ ಬರೆಸುತ್ತಾರೆ; ನಿರ್ದೇಶನಕ್ಕೆ  ಬಿಮಲ್ ರಾಯ್ ರ ಸಹಾಯಕ ನಿರ್ದೇಶಕ ಬಸು ಭಟ್ಟಾಚಾರ್ಯರನ್ನು ಕರೆತರುತ್ತಾರೆ. ಮುಖ್ಯಪಾತ್ರದಲ್ಲಿ ತನ್ನ ಮಿತ್ರ ರಾಜ್ ಕಪೂರ್ ಮತ್ತು ಆತನಿಗೆ ನಾಯಕಿಯಾಗಿ ವಹೀದಾ ರಹಮಾನ್ ನಟಿಸುತ್ತಾರೆ. ಶೈಲೇಂದ್ರ ಈ ಚಿತ್ರ ನಿರ್ಮಾಣಕ್ಕೆ ತನ್ನ ತನು, ಮನ, ಧನವನ್ನೆಲ್ಲ ಅರ್ಪಿಸುತ್ತಾರೆ. ‘ತೀಸ್ರೀ ಕಸಮ್ ನ ಚಿತ್ರ ನಿರ್ಮಾಣ ಸರಾಗವಾಗಿ ಸಾಗುವುದಿಲ್ಲ; ಸಹಜವಾಗಿ ಬರಬೇಕೆಂಬ ಉದ್ದೇಶದಿಂದ ಚಿತ್ರೀಕರಣದ ಲೊಕೇಶನ್ ಮುಂಬೈನ ಸ್ಟುಡಿಯೊಗಳಿಂದ ಮಧ್ಯಪ್ರದೇಶದ ಬಿನಾ ಎಂಬ ಊರಿಗೆ ಸ್ಥಳಾಂತರಗೊಳ್ಳುತ್ತದೆ; ದೂರ ದೂರಿನ ಚಿತ್ರೀಕರಣವಾದ್ದರಿಂದ ಎಲ್ಲ ಅಸ್ತ-ವ್ಯಸ್ತವಾಗುತ್ತದೆ; ಏರಿದ ಬಜೆಟ್, ಸಮಯಕ್ಕೆ ಸರಿಯಾಗಿ ಸಿಗದ ರಾಜ್ ಕಪೂರರ ಡೇಟ್ಸ್; ಇವೆಲ್ಲದರ ನಡುವೆ ಆಗಾಗ್ಗೆ ಮುಂದೂಡಲ್ಪಡುವ ಚಿತ್ರೀಕರಣ ಐದು ಧೀರ್ಘ ವರ್ಷಗಳ ಕಾಲ ಹಿಡಿಯುತ್ತದೆ. ಈ ನಡುವೆ ನಿಜವಾದ ಮಿತ್ರರಾರು ಎಂಬುದು ಶೈಲೇಂದ್ರರಿಗೆ ತಿಳಿಯುತ್ತದೆ. ರಾಜ್ ಕಪೂರ್ ಮತ್ತು ಮುಕೇಶ್ ಹೊರತಾಗಿ ಎಲ್ಲ ಸ್ನೇಹಿತರು ಅವರನ್ನು ಕೈಬಿಡುತ್ತಾರೆ; ಶೈಲೇಂದ್ರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತೂ ತೀಸ್ರೀ ಕಸಮ್ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಾಣದೆ ನೆಲ ಕಚ್ಚುತ್ತದೆ. ಚಿತ್ರದ ಸೋಲನ್ನು ಜೀರ್ಣಿಸಿಕೊಳ್ಳಲಾಗದೆ ಶೈಲೇಂದ್ರರ ಆರೋಗ್ಯ ಕೆಡುತ್ತದೆ; 1966 ರ ಡಿಸೆಂಬರ್ 13 ರಂದು ತೀವ್ರ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳುತ್ತಾರೆ; ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ತನ್ನ ಮಿತ್ರನಾದ ರಾಜ್ ಕಪೂರನ ಕುಟೀರ ಬರುತ್ತದೆ; ಮಿತ್ರನನ್ನು ಮಾತಾಡಿಸಿ ಹೋಗಬೇಕೆನಿಸುತ್ತದೆ; ಒಳಗೆ ಹೋಗಿ ಮಿತ್ರನೊಡನೆ ಮಾತನಾಡಿ ಅಪೂರ್ಣವಾಗಿದ್ದ ಮೆರಾ ನಾಮ್ ಜೋಕರ್ ಸಿನಿಮಾದ “ ಜೀನಾ ಯಹಾ, ಮರ್ನಾ ಯಹಾ…” ಹಾಡನ್ನು ಆಸ್ಪತ್ರೆಯಿಂದ ಹಿಂತಿರುಗಿ ಬಂದ ಮೇಲೆ ಪೂರ್ಣಗೊಳಿಸುವುದಾಗಿ ಹೇಳಿ ಹೊರಟ 43 ವರ್ಷದ ಶೈಲೇಂದ್ರ ಮತ್ತೆ ಮರಳಲೇ ಇಲ್ಲ; ಮರುದಿನ ಡಿಸೆಂಬರ್ 14, ತನ್ನ ಆಪ್ತಮಿತ್ರ ರಾಜ್ ಕಪೂರನ ಜನ್ಮದಿನದಂದು ಭಾರತೀಯ ಚಿತ್ರರಂಗ ಕಂಡ ಅಭೂತಪೂರ್ವ ಕವಿ, ಗೀತಕಾರ ಚೇತನ ಈ ಲೋಕ ಬಿಟ್ಟು ತೆರಳಿತು; ತೀಸ್ರೀ ಕಸಮ್ ಚಿತ್ರ ಶೈಲೇಂದ್ರರ ಜೀವವನ್ನೇ ತಿಂದಿತು.

Shailendra last journeyಮುಂದೆ ‘ತೀಸ್ರೀ ಕಸಮ್’ ಚಿತ್ರ ಕ್ರಮೇಣ ಜನ ಮನ್ನಣೆಯನ್ನು ಗಳಿಸಿ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಗಳಿಸುತ್ತದೆ. ಇಂದಿಗೂ ‘ತೀಸ್ರೀ ಕಸಮ್’ ಸರ್ವೋತ್ತಮ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ.

ಶೈಲೇಂದ್ರರು ಬರೆದ ಹಾಡುಗಳು ಇಂದಿಗೂ ಜನರ ಮನದಲ್ಲಿವೆ. ‘ಆವಾರಾ’ ಸಿನಿಮಾದ “ಆವಾರಾ ಹ್ಞೂಂ…”, ಬರ್ಸಾತ್ ಸಿನಿಮಾದ ” ಬರ್ಸಾತ್ ಮೆ ಹಮ್ ಸೆ ಮಿಲೆ…, ಶ್ರೀ 420 ಸಿನಿಮಾದ ” ಪ್ಯಾರ್ ಹುವಾ ಇಕರಾರ್ ಹುವಾ..”, ” ರಾಮಯ್ಯ ವಸ್ತಾವಯ್ಯ “, “ಮುಡ್ ಮುಡ್ ಕೆ ನ ದೇಖ್ ಮುಡ್ ಮುಡ್ ಕೆ..”, ಮೇರಾ ಜೂತಾ ಹೆ ಜಪಾನಿ..; ಗೈಡ್ ಸಿನಿಮಾದ “ಆಜ್ ಫಿರ್ ಜೀನೇ ಕಿ ತಮನ್ನಾಹೆ..” , ” ಗಾತಾ ರಹೇ ಮೆರಾ ದಿಲ್ …” , ” ಪಿಯಾ ತು ಸೆ ನೈನಾ ಲಾಗೆ ರೇ…” , ಸಂಗಮ್ ಸಿನಿಮಾದ ” ದೋಸ್ತ್  ದೋಸ್ತ್ ನ ರಹಾ.”; ದಿಲ್ ಅಪನಾ ಔರ್ ಪ್ರೀತ್ ಪರಾಯೆ ಸಿನಿಮಾದ ” ಅಜೀಬ್ ದಾಸ್ತಾನ್ ಹೈ ಕಹಾ ಶುರು ಕಹಾ ಖತಮ್… ” , ತೀಸ್ರಿ ಕಸಂ ಸಿನಿಮಾದ “ಸಜನೆ ರೇ ಜೂಟ್ ಮತ್ ಬೋಲೊ…” , ” ಪಾನ್ ಖಾಯೆ ಸಯ್ಯಾ ಹಮಾರೊ…”

ಆದರೆ ಈ ಗೀತೆಗಳನ್ನೆಲ್ಲ ಶೈಲೇಂದ್ರರು ಬರೆದದ್ದು ಎಂಬುದು ಮಾತ್ರ ಮಾಸಿ ಹೋಗಿದೆ.

ಸಜನೆ ರೇ ಜೂಟ್ ಮತ್ ಬೋಲೊ,
ಖುದಾ ಕೆ ಪಾಸ್ ಜಾನಾ ಹೆ
ನ ಹಾಥಿ ಹೆ, ನ ಗೋಡಾ ಗೆ,
ವಹಾ ಪೈಗಲ್ ಹೀ ಜಾನಾ ಹೇ…

ಛೋಟಿ ಸಿ ಹೆ ದುನಿಯಾ,
ಪೆಹೆಚಾನೆ ರಾಸ್ತೆ ಹೆ, ಕಭೀತೊ ಮಿಲೋಗೆ,
ಕಹೀತೊ ಮಿಲೋಗೆ,
ತೊ ಪೂಚೆಂಗೆ ಹಾಲ್….

ಎಂದು ಹಾಡಿದ ಕೋಗಿಲೆ ಅಮರವಾಗಲಿ.

ಮೌಢ್ಯವೇ ಧರ್ಮವಾದಾಗ

ನೇಪಾಳದ ಕಠ್ಮಂಡುವಿನಿಂದ ನೂರು ಮೈಲಿ ದಕ್ಷಿಣಕ್ಕಿರುವ ಬಾರಾ ಜಿಲ್ಲೆಯ ಬರಿಯಾರಪುರದ ಗಧಿಮಾಯಿ ದೇವಳದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಗಧಿಮಾಯಿ ಪರ್ಬ(ಹಬ್ಬ)ದಲ್ಲಿ ಸುಮಾರು ಐದು ಲಕ್ಷ ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಎಮ್ಮೆ, ಹಂದಿ, ಮೇಕೆ, ಕುರಿ ಕೋಳಿ ಮತ್ತು ಬಿಳಿ ಇಲಿಗಳನ್ನು ಬರ್ಬರವಾಗಿ ವಧಿಸಲಾಗುತ್ತದೆ.  ಈ ಭಯಾನಕ ವಧೆಯ ದೃಷ್ಯಗಳು ನೋಡುವವರ ಎದೆಯನ್ನು ಒಮ್ಮೆ ಝಲ್ಲೆಂದು ನಡುಗಿಸುತ್ತವೆ. ಈ ಪ್ರಮಾಣದ, ಇಷ್ಟು ಘೋರವಾದ ಪ್ರಾಣಿಗಳ ಮಾರಣಹೋಮ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲವೆಂದೇ ಹೇಳಬೇಕು.

ಮಡೆ ಸ್ನಾನ made snanaದೇವರ ಕೃಪೆಗಾಗಿ ನಡೆಯುವ ಈ ಬಲಿಯ ಆಚರಣೆ ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ವೇದಗಳ ಕಾಲದಲ್ಲಿ ಚಾಲ್ತಿಯಲ್ಲಿತ್ತು ಎಂದು ಹೇಳಲಾಗುವ ಪುರುಷಮೇಧ, ಅಶ್ವಮೇಧ ಇವುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಂದೆಡೆ ಅವು ಸಾಂಕೇತಿಕವಾಗಿದ್ದವು ಎಂದು ಹೇಳಲಾಗುತ್ತದೆ; ಮತ್ತೊಂದೆಡೆ ಅವುಗಳು ಸಾಂಕೇತಿಕವಾಗುವ ಮೊದಲು ಆಚರಣೆಯಲ್ಲಿದ್ದವು; ಕ್ರಮೇಣ ಅವು ವಿಚಾರ ಮಂಥನಕ್ಕೆ ಸಿಕ್ಕು ಕಾಲಾನಂತರದಲ್ಲಿ ಸಾಂಕೇತಿಕವಾಗಿ ಬದಲಾವಣೆ ಹೊಂದಿದವು ಎಂದು ಹೇಳಲಾಗುತ್ತದೆ. ಇಷ್ಟು ವಿವರಗಳನ್ನು ಇಂದು ನಾವು ಮಂಥನಕ್ಕೆ ಒಡ್ಡಿದರೆ  ಈ ವೈಚಾರಿಕ ಪ್ರಜ್ಞೆ, ಅದು ಪುರೋಹಿತ ವರ್ಗದಲ್ಲಿ ತಂದ ಬದಲಾವಣೆಯು ಸಮಾಜದ ಕೆಳ ಸ್ತರಗಳಿಗೆ ಏಕೆ ಇಳಿಯಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಬಹುಶಃ ಅಂದು ಅದು ಕೆಳಗಿನ ಸ್ತರಗಳಿಗೆ ಇಳಿದಿದ್ದರೆ ಇಂದು ಶೂದ್ರರು ಮಾರಮ್ಮನಿಗೆ ಕುರಿ, ಕೋಳಿ, ಕೋಣಗಳ ಬಲಿಯನ್ನು ಕೊಡುತ್ತಿರಲಿಲ್ಲವೇನೋ.. ತಮ್ಮನ್ನು ಬದಲಾವಣೆಗೆ ಒಡ್ಡಿಕೊಂಡ ಪುರೋಹಿತ ವರ್ಗವು ತಮ್ಮ  ಸೇವೆಯಲ್ಲಿದ್ದ ಶೂದ್ರರಲ್ಲಿ ಈ ಅರಿವನ್ನು ಮೂಡಿಸದಿರುವ ಅನಿವಾರ್ಯತೆಯನ್ನು ಕಾರ್ಲ್ ಮಾರ್ಕ್ಸ್ ನ ಬಂಡವಾಳ ಮತ್ತು ಶ್ರಮದ ಹಾಗೂ ಶೋಷಕರು ಮತ್ತು  ಶೋಷಿತರ ನಡುವಿನ ಸಂಬಂಧದ ಪರಿಭಾಷೆಯಲ್ಲಿ ಅರಿಯಬಹುದು. ಶೋಷಕರ ಸೇವೆಯೇ ತಮ್ಮ ಜೀವನ ಕ್ರಮ, ತಾವು ಅನುಭವಿಸುವ ತಾರತಮ್ಯವೇ ತಮ್ಮ ಪ್ರಾರಬ್ಧ ಎಂಬ ಮನಸ್ಥಿತಿಗೆ ತಳ್ಳಲ್ಪಟ್ಟ ಶೂದ್ರರು ಯಾವುದೆ ಮೇಲರಿಮೆ ಅಥವ ಕೀಳರಿಮೆಯಲ್ಲಿ ಸಿಲುಕದೆ, ಹುಲಿಯ ಆಕ್ರಮಣಕ್ಕೆ ಒಳಗಾಗುವುದೇ ತನ್ನ ಧರ್ಮವೆಂದು ಅರಿತ ಪುಣ್ಯಕೋಟಿ ಗೋವಿನಂತಿದ್ದರು.   ಇಂಥಹ ಮನಸ್ಥಿತಿಯಲ್ಲಿ ತಮ್ಮ ಸೇವೆಯಲ್ಲಿ ತೊಡಗಿರುವ ಶೂದ್ರರಿಗೆ ವಿವೇಕವನ್ನು ತುಂಬುವುದು, ಅವರ ಆಚರಣೆಗಳನ್ನು ಸುಧಾರಿಸುವುದು, ತನ್ಮೂಲಕ ಬದಲಾವಣೆಯ ಬೀಜವನ್ನು ಬಿತ್ತುವುದು ಪುರೋಹಿತ ವರ್ಗಕ್ಕೆ ತಾವು ನಿಂತ ನೆಲವನ್ನೇ ಅಗೆಯುವಂಥ ಸ್ಥಿತಿಯಾಗಿತ್ತು.  ಅರಿವಿನ ಸೆಲೆಗೆ ಸಿಕ್ಕ ಶೂದ್ರರು ಜ್ಞಾನೋದಯದಿಂದ ತಮ್ಮ ಸೇವೆಯನ್ನು ತ್ಯಜಿಸಿಯಾರೆಂಬ ಆತಂಕದ ಭೀತಿಗೆ ಸಿಕ್ಕ ಪುರೋಹಿತ ವರ್ಗ ಅವರನ್ನು ಇರುವಂತೆಯೇ ಬಿಟ್ಟು ಸ್ವಹಿತಕ್ಕಾಗಿ ತನ್ನಷ್ಟಕ್ಕೆ ತಾನು ಮುನ್ನಡೆಯಿತು. ಇಂದು ಬಹುತೇಕ ಶೂದ್ರರೇ ದೇವರನ್ನು ಒಲಿಸಿಕೊಳ್ಳಲು, ದೇವರ ಕೃಪೆಗೆ ಪಾತ್ರರಾಗಲು ಕುರಿ, ಕೋಳಿ, ಕೋಣಗಳನ್ನು ಬಲಿಕೊಡುವ ಆಚರಣೆಯಲ್ಲಿದ್ದಾರೆ. ದೇವರ ಕೃಪೆಯನ್ನು ದಯಪಾಲಿಸುವ ಕಾಯಕವೆಂದು ಮನಸ್ಸಿನಲ್ಲಿ ಬೇರೂರಿರುವುದರಿಂದ ಶೂದ್ರರೂ ಈ ಆಚರಣೆಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ.

ಸ್ವತಂತ್ರ ಭಾರತದ  ಸಮಾಜದಲ್ಲಿ ಆರ್ಥಿಕ ಸಮೀಕರಣಗಳು ಬದಲಾಗಿವೆ. ಸೇವೆಗಳೆಲ್ಲ ಸಾಮಾಜಿಕ ಸ್ತರಗಳ ಆವರಣಗಳನ್ನು  ದಾಟಿ ಮಾರುಕಟ್ಟೆ-ಅರ್ಥವ್ಯವಸ್ಥೆಯ  ಮಾರುಕಟ್ಟೆಗೆ ಬಂದು ನಿಂತಿವೆ. ಸಾಮಾಜಿಕ ಸ್ಥಾನಮಾನಗಳನ್ನು ಮೀರಿ  ಆರ್ಥಿಕ ಸ್ಥಾನಮಾನಗಳು ಸೇವೆಗಳ ಹರಿವನ್ನು ನಿರ್ಧರಿಸುತ್ತಿವೆ. ಸ್ಥಿತಿವಂತ ಶೂದ್ರರು, ದಲಿತರು ಪುರೋಹಿತ ಮತ್ತು ಮೇಲು ವರ್ಗವೆಂದು ಕರೆಯಿಸಿಕೊಳ್ಳುವವರ ಸೇವೆಯನ್ನೂ ಪಡೆಯುವಂತಾಗಿದ್ದಾರೆ.  ಇನ್ನು ಪುರೋಹಿತ ವರ್ಗವು ಆರ್ಥಿಕವಾಗಿ ಸಬಲರಾಗುವ ಅನ್ಯ ಮಾರ್ಗಗಳನ್ನು ಶೋಧಿಸಿ ಅವುಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮಾದಿಗರು, ಸಮಗಾರರು ತೊಡಗಿದ್ದ ಪಾದರಕ್ಷೆಗಳ ಉದ್ಯೋಗದಲ್ಲಿ ಈಗ  ಮೇಲು ವರ್ಗದವರು ತೊಡಗಿಕೊಂಡಿದ್ದಾರೆ. ನ್ಯೂಜಿಲ್ಯಾಂಡಿನಲ್ಲಿ ಕಮ್ಯೂನಿಕೇಷನ್ ಪದವಿ ಪಡೆದ ಶಶಾಂಕ್ ಭಾರಧ್ವಾಜ್ ಎಂಬುವವರು ಬೆಂಗಳೂರಿನ ಜಯನಗರದಲ್ಲಿ  ಹಳೆಯ  ಶೂಗಳನ್ನು ರಿಪೇರಿಮಾಡಿ ಸ್ವಚ್ಛಗೊಳಿಸುವ ಶೂ-ಲಾಂಡ್ರಿಯನ್ನು ತೆರೆದಿದ್ದಾರೆ. ಇನ್ನು, ವ್ಯವಹಾರ, ಶಿಕ್ಷಣ, ಉನ್ನತ ಉದ್ಯೋಗದಲ್ಲಿ ತೊಡಗಿ  ಆರ್ಥಿಕವಾಗಿ ಸಬಲರಾದ ದಲಿತರ ಮನೆಗಳಲ್ಲಿ ಹೊಸ ಧಾರ್ಮಿಕ ಆಚರಣೆಗಳು ಹುಟ್ಟಿಕೊಂಡಿವೆ.  ಉಳಿದಂತೆ ಪೌರೋಹಿತ್ಯವನ್ನೇ ಜೀವನಕ್ಕಾಗಿ ಅವಲಂಬಿಸಿರುವ ಜನರು ತಮ್ಮ ವೃತ್ತಿಯನ್ನು ವೃದ್ಧಿಸುವ ಅದನ್ನು ಆರ್ಥಿಕವಾಗಿ ಸದೃಢವಾದ ವೃತ್ತಿಯನ್ನಾಗಿ ರೂಪಿಸುವ, ಪೋಷಿಸುವ ಹಾಗೂ ಬೆಳೆಸುವಲ್ಲಿ ನಿರತರಾಗಿದ್ದಾರೆ.  ಇದರ ಪರಿಣಾಮವಾಗಿ ಬರೀ ಕುರಿ, ಕೋಳಿ, ಕೋಣಗಳನ್ನು ಕಡಿದು ಮಾರಮ್ಮನ ಹಬ್ಬ ಮಾಡುತ್ತಿದ್ದ ದಲಿತರ ಮನೆಗಳಲ್ಲಿ ಹೋಮ ಹವನ, ಸತ್ಯನಾರಾಯಣ ವೃತ, ಪೂಜೆ ಇತ್ಯಾದಿ ಆರಂಭವಾಗಿ ಸೋಮವಾರ, ಗುರುವಾರ ಮಾಂಸ ಸೇವನೆ ವರ್ಜ್ಯಮಾಡಬೇಕೆಂಬ ಹೊಸ ನಂಬಿಕೆಗಳು ಹುಟ್ಟುತ್ತಿವೆ.  ದ್ವೈತ, ಅದ್ವೈತ ತತ್ವಗಳ ನಡುವಿನ ತೀವ್ರ ತಾತ್ವಿಕ ಭಿನ್ನಾಭಿಪ್ರಾಯ ಅದರ ಗಂಧ ಗಾಳಿ ಅರಿಯದೆ ತಮ್ಮಷ್ಟಕ್ಕೆ ತಾವು ಇದ್ದ ಶೂದ್ರರು ತಮಗರಿವಿಲ್ಲದಂತೆಯೇ ತಮ್ಮ ಮೇಲೆ ಆದ ಪ್ರಭಾವದಿಂದ ದ್ವೈತ ಮಠಗಳ ಭಕ್ತರಾಗುತ್ತಿದ್ದಾರೆ. ಇದೊಂಥರ ಆಂತರಿಕ ಮತಾಂತರವೆಂದೇ ಹೇಳಬಹುದು; ಹೇಗೆಂದರೆ ಇಲ್ಲಿಯವರೆಗೆ ದ್ವೈತ ತತ್ವಪಾಲಿಸಿಕೊಂಡು ಬಂದವರು, ಅದ್ವೈತ ಸಿದ್ಧಾಂತ ಪಾಲಿಸಲು ಮುಂದಾದರೆ ಅದನ್ನು ಆಂತರಿಕ ಮತಾಂತರವೆಂದು ತಾನೆ ಹೇಳುವುದು.  ದ್ವೈತ, ಅದ್ವೈತ ಯಾವುದರ ಗೊಡವೆಗೆ ಹೋಗದೆ ತಮ್ಮಷ್ಟಕ್ಕೆ ತಮ್ಮದೇ ದೇವರು, ಆಚರಣೆ, ನಂಬಿಕೆಗಳಲ್ಲಿ ತೊಡಗಿದ್ದ  ಶೂದ್ರರು ಏಕಾ ಏಕಿ  ದ್ವೈತ ಮಠಗಳಿಗೆ ಅಥವ ಅದ್ವೈತ ಮಠಗಳಿಗೆ ಹೋಗಲಾರಂಭಿಸಿದರೆ, ಅಲ್ಲಿನ ಆಚರಣೆಗಳನ್ನು, ನಂಬಿಕೆಗಳನ್ನು ಅನುಸರಿಸತೊಡಗಿದರೆ ಅದನ್ನು ಮತಾಂತರವೆಂದಲ್ಲದೆ ಏನೆಂದು ಕರೆಯಬೇಕು? ಅಷ್ಟಕ್ಕೂ ಹಿಂದೆಂದೂ ಹೀಗೆ ಮಾಡದ ಪುರೋಹಿತ ವರ್ಗವು, ಈಗ ಶೂದ್ರರಿಗೆ ವಿವೇಕವನ್ನು ತುಂಬುವ, ಅವರ ಆಚರಣೆಗಳನ್ನು ಮಾರ್ಪಡಿಸುವ, ಹೊಸ ಆಚರಣೆಗಳನ್ನು ಬಿತ್ತುವ, ಹೊಸ ನಂಬಿಕೆಗಳಲ್ಲಿ ಅವರನ್ನು ಬಂಧಿಸುವ ಕಾಯಕಕ್ಕೆ ಬಿದ್ದುದೇಕೆ? ಬದಲಾಗುತ್ತಿರುವ ಆರ್ಥಿಕ ಸಮೀಕರಣದಲ್ಲಿ ವಿದ್ಯಾವಂತ ಶೂದ್ರರು ತಮ್ಮ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢರಾಗತೊಡಗಿದಂತೆ ಪುರೋಹಿತ ಕಾಯಕಕ್ಕೆ ಉಳಿಗಾಲವಿಲ್ಲದಂತಾಯಿತು. ಹಲವರು ಈ ಪೌರೋಹಿತ್ಯವನ್ನು ತ್ಯಜಿಸಿ ಅನ್ಯ ಜೀವನಮಾರ್ಗವನ್ನು ಅರಸಿ ಹೋದರು; ಹೋಗಲಾಗದೆ ಉಳಿದವರು ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಲ್ಲಿ ಪೌರೋಹಿತ್ಯವನ್ನು ಪುನರುಜ್ಜೀವನಗೊಳಿಸುವ ತನ್ಮೂಲಕ ತಮ್ಮ ಉಳಿವನ್ನು ಕಾಯ್ದುಕೊಳ್ಳುವ ಯೋಜನೆಗೆ ತೊಡಗಿದರು. ಈ ಯೋಜನೆಯ ಹಂಚಿಕೆಯ ಫಲವಾಗಿ ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯ, ಜಾತಕ ಫಲ ಶೂದ್ರರ ಆವರಣದೊಳಕ್ಕೆ ಕಾಲಿಟ್ಟವು. ಇವುಗಳಲ್ಲಿನ ದೋಷಗಳ ಪರಿಹಾರಕ್ಕೆ ಹೋಮ, ಹವನ, ವೃತ, ಪೂಜೆಗಳು ಶೂದ್ರರ ಮನೆ, ಮನಗಳಲ್ಲಿ ಪ್ರಬಲವಾಗಿ ಪುನರುಜ್ಜೀವನಗೊಂಡು ಹೊಸ ಆಚರಣೆಗಳು, ನಂಬಿಕೆಗಳು   ಹೊಸ ತಲೆಮಾರನ್ನು ಬಂಧಿಸಿ ಆಧೀರರನ್ನಾಗಿಸಿವೆ. ಇಂಥಹ ಜಾಲದಲ್ಲಿ ಶೂದ್ರರ ಹೊಸತಲೆಮಾರು ಸಿಲುಕಿಕೊಂಡಷ್ಟು, ಸ್ವಾತಂತ್ರೋತ್ತರದಲ್ಲಿ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢವಾದ ಅವರ ಹಿಂದಿನ ತಲೆಮಾರು ಸಿಲುಕಲಿಲ್ಲ. ಹೊಸ ತಲೆಮಾರಿವರು ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರದ ಪ್ರಭಾವಕ್ಕೊಳಗಾಗಿ ಅಧೀರರಾಗಿ ತಮ್ಮ ಅಜ್ಜಂದಿರು ಕಟ್ಟಿ ನೂರಾರು ವರ್ಷ ಬಾಳಿ ಬದುಕಿದ ಮನೆಯ ಗೋಡೆಗಳನ್ನು ವಾಸ್ತುದೋಷವಿದೆ ಎಂದು ಒಡೆದು ಸ್ನಾನದ ಮನೆಯನ್ನು ಮಲಗುವ ಕೋಣೆಯನ್ನಾಗಿ ಪರಿವರ್ತಿಸುವಲ್ಲಿ ಅಥವ ತಮ್ಮ ಅಪ್ಪ-ಅಮ್ಮಂದಿರು ಇಟ್ಟ ಹೆಸರನ್ನು ಸಂಖ್ಯಾಶಾಸ್ತ್ರಜ್ಞರು ಹೇಳುವಂತೆ ಬದಲಾಯಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.

ತಮ್ಮನ್ನು ಹೊಸದಾಗಿ ಆವರಿಸಿ, ಬಂಧಿಸಿರುವ ಹೊಸ ಆಚರಣೆಗಳು, ನಂಬಿಕೆಗಳು ಶೂದ್ರರ ಬದುಕನ್ನು ನಿರಂತರವಾಗಿ ಮತ್ತೆ ಪುರೋಹಿತ ವರ್ಗದ ಪ್ರಭಾವದ ದಾಸ್ಯದೊಳಕ್ಕೆ ನೂಕುತ್ತಿವೆ. ಹೀಗೆ ಬಿತ್ತಲ್ಪಟ್ಟ ಆಚರಣೆಗಳನ್ನು, ನಂಬಿಕೆಗಳನ್ನು ಶೂದ್ರರ ಹೊಸ ತಲೆಮಾರು ಅನುಸರಿಸತೊಡಗಿದರೆ ಮುಂದಿನ ಎರಡು ಮೂರು ಶತಮಾನಗಳವರೆಗೆ ಶೂದ್ರರು ತಮ್ಮ ಶ್ರಮದ ಫಲವನ್ನು ಅವರ ದೇವರುಗಳಿಗೆ, ಅವರ ಮಠಗಳಿಗೆ ಅರ್ಪಿಸಿ ತಮ್ಮ ಗಳಿಕೆಯ ಭಾಗವೊಂದನ್ನು ಕಾಣಿಕೆಯ, ದಕ್ಷಿಣೆಯ ರೂಪದಲ್ಲಿ ನಿರಂತರವಾಗಿ ಸಲ್ಲಿಸುವುದರಲ್ಲಿ ಸಂದೇಹವೇ ಇಲ್ಲ. ಮುಂದುವರಿದು, ವ್ಯವಸ್ಥಿತವಾಗಿ ಶೂದ್ರರ ಒಡನಾಟ ಅವರ ಮಠಗಳಿಗೆ, ಅವರ ದೇವರುಗಳಿಗೆ ನಿರಂತರವಾಗಿ ಇರುವಂತೆ ಅವರನ್ನು ಹೊಸ-ಹೊಸ ನಂಬಿಕೆಗಳಲ್ಲಿ, ಅಚರಣೆಗಳಲ್ಲಿ ಬಂಧಿಸಲಾಗುವುದು. ಒಟ್ಟಿನಲ್ಲಿ  ಪೌರೋಹಿತ್ಯವು  ತನ್ನ ಹೊಸ ನೆಲೆಯಲ್ಲಿ ಪುನರುಜ್ಜೀವನ ಗೊಂಡು, ವೈದಿಕ ಸಂಕೊಲೆಗಳಿಂದ ಮುಕ್ತರಾದ ಶೂದ್ರರನ್ನೂ ಮೌಢ್ಯದ ದಾಸ್ಯದೊಳಕ್ಕೆ ಪುನಃ ತಳ್ಳುತ್ತಿದೆ.

ತಮ್ಮ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳು ಪೊರೆಯುವ  ಆಚರಣೆಗಳು, ನಂಬಿಕೆಗಳು ಬದಲಾಗುತ್ತಿರುವ ಸಮಾಜಕ್ಕೆ ಕಂಟಕಕಾರಿಯಾಗುವಂತಿದ್ದರೂ ಅವುಗಳನ್ನು ಸುಧಾರಿಸುವ, ಬದಲಾಯಿಸುವ ಅಥವ ನಿಲ್ಲಿಸುವ ಯೋಚನೆಯನ್ನು ಮಾಡುವುದಿಲ್ಲ. ಬದಲಿಗೆ ದೇವರ ಹೆಸರಿನಲ್ಲಿ, ಭಕ್ತರ ಶ್ರಮದ ಫಲವನ್ನು ದೇವರ ಕೃಪೆಗೆ ಆರೋಪಿಸುವ,  ಇನ್ನಷ್ಟು ಮೌಢ್ಯವನ್ನು ಸೃಷ್ಟಿಸಿ ಜನರು ಸದಾ ಈ ನಂಬಿಕೆಗಳ, ಮೌಢ್ಯಗಳ, ತನ್ಮೂಲಕ ಈ ಧಾರ್ಮಿಕ  ಕೇಂದ್ರಗಳ ಸುತ್ತ ಗಿರಕಿ ಹೊಡೆಯುವಂತೆ ನಂಬಿಕೆಗಳ, ಆಚರಣೆಗಳ ಜಾಲವನ್ನೇ ಹೆಣೆಯಲಾಗುತ್ತಿದೆ.

ಹೀಗೆ ಆರ್ಥಿಕ ನೆಲೆಯಲ್ಲಿ ಪುನರುಜ್ಜೀವನಗೊಳ್ಳುವ ಮೌಢ್ಯವು ಬಲಿಷ್ಟವಾಗಿದ್ದು ಎಲ್ಲ ರೀತಿಯಲ್ಲೂ ತನ್ನನ್ನು ರಕ್ಷಿಸಿಕೊಳ್ಳುವ ತಂತ್ರಗಾರಿಕೆಯನ್ನು, ಹಂಚಿಕೆಯನ್ನು ಹೊಂದಿರುತ್ತದೆ. ದೇಹದೊಳಕ್ಕೆ ಸೇರಿಕೊಳ್ಳುವ ವೈರಸ್ ಜೀವಕೋಶದೊಳಗೆ ಹೊಕ್ಕು ತನ್ನ ತದ್ರೂಪನ್ನೇ ಸೃಷ್ಟಿಸುವಂತೆ, ಡಿ.ಎನ್.ಎ ಅನ್ನು ಮಾರ್ಪಡಿಸುವಂತೆ, ಇವು ಜನರ ಮನದಾಳಕ್ಕಿಳಿದು, ಜನರೇ ಸ್ವಯಂ ಇವುಗಳನ್ನು ಪೊರೆದು ಪೋಷಿಸುವಂತೆ ಅವರ ಮನಸ್ಸನ್ನು ಆವರಿಸಿ ಬಿಡುತ್ತವೆ. ಇವು ದೇಶದ ಕಾನೂನನ್ನೂ ಯಾಮಾರಿಸಿ, ರಂಗೋಲಿಯ ಕೆಳಗೆ ತೂರುವಷ್ಟು ನಯವಂಚಕತನವನ್ನು ಮೈಗೂಡಿಸಿಕೊಂಡಿವೆ.

ಮಡೆ ಸ್ನಾನ, ಪಂಕ್ತಿ ಭೇಧ, ವರ್ಣಾಶ್ರಮಾಚರಣೆಗಳೆಲ್ಲವೂ  ಇಂಥಹ ವ್ವವಸ್ಥಿತ ಜಾಲದ ಸುಳಿಗೆ ಸಿಕ್ಕ ಕರಾಳ, ಅಮಾನವೀಯ, ತಾರತಮ್ಯದ ಆಚರಣೆಗಳಾಗಿವೆ. ಇವುಗಳ ಪೋಷಕರು ಭಾರತದ ಸಮೃದ್ಧ ಸಂಸ್ಕೃತಿಯನ್ನು ಕಾಪಿಡುವ, ಸಂರಕ್ಷಿಸುವ ಕಾನೂನಿನಡಿಯಲ್ಲಿ ನ್ಯಾಯಾಲಯಗಳನ್ನು ದಿಕ್ಕು ತಪ್ಪಿಸಿ ಈ ಕಾನೂನಿನಡಿಯಲ್ಲೇ ಆಸರೆ ಪಡೆಯುವ, ಉಳಿಯುವ ಹಂಚಿಕೆಯಲ್ಲಿವೆ.

ಇದನ್ನು ಗ್ರಹಿಸಿಯೇ ಕುವೆಂಪು ಹೇಳಿದ್ದು:

ನೂರು ದೇವರನೆಲ್ಲ ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ….

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನುಪೂಜಿಸಿಯೇದಾಸ್ಯವಾಯ್ತು
ಭಾರತಾಂಬೆಯೇ ದೇವಿ….

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈಶಂಖದಿಂ
ಭಾರತಾಂಬೆಯೇ ದೇವಿ ನಮಗಿಂದು…

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.
ಭಾರತಾಂಬೆಯೇ ದೇವಿ ನಮಗಿಂದು

ಪೂಜಿಸುವ ಬಾರಾ ಬಾರಾ.

ಸಂಸ್ಕೃತಿಯ ಪಹರೆಯೊಳಗೆ ಕಮರಿದ ಹೂಗಳು

ದೆಹಲಿಯ ಶಹರದಲ್ಲಿ ತಂದೆಯೊಬ್ಬ ಮಗಳ ಕಾಲುಗಳನ್ನು ಬಿಗಿಯಾಗಿ ಹಿಡಿಯುತ್ತಾನೆ; ಹೆತ್ತ ತಾಯಿಯೇ ಮಗಳ ಉಸಿರುಗಟ್ಟುತ್ತಾಳೆ, ಹೆತ್ತಮ್ಮಗಳ ಕೈಯಾರೆ ಮಗಳು ವಿಲವಿಲ ಒದ್ದಾಡಿ ಸಾಯುತ್ತಾಳೆ; ಕುಟುಂಬದ, ವಂಶದ ಮರ್ಯಾದೆ ಉಳಿಯಿತು ಎಂಬ ಹಮ್ಮಿನಲ್ಲಿ ಸಂಬಂಧಿಕರು, ಪೋಷಕರು ನಿಟ್ಟುಸಿರು ಬಿಡುತ್ತಾರೆ.

Bhawna Yadav_Abhishek Picದೆಹಲಿಯ ಕಿರುಗಲ್ಲಿಯೊಂದರಲ್ಲಿ ಸಾಲು ಸಾಲಾಗಿ ತೆರೆದುಕೊಳ್ಳುವ ಮಾಂಸದಂಗಡಿಗಳು, ರಿಯಲ್ ಎಸ್ಟೇಟ್ ಬ್ರೋಕರುಗಳ ಅಡ್ಡೆಗಳು; ಇವನ್ನೆಲ್ಲ ಮೈಮೇಲೆ ಹೊದ್ದುಕೊಂಡಂತಿರುವ, ದೆಹಲಿಯ ದ್ವಾರಕಾ ಎಂಬ ಮಧ್ಯಮ ವರ್ಗದ ಕಾಲನಿಗೆ ಅಂಟಿಕೊಂಡಿರುವ ಭಾರತ್ ವಿಹಾರ್ ಎಂಬ ಹಳ್ಳಿಗಾಡಿನಂತಹ ಕಾಲನಿಯಲ್ಲಿ ರಾಜಸ್ಥಾನ ಮೂಲದ ಸಂಪ್ರದಾಯಸ್ಥ ಯಾದವ ಕುಟುಂಬದ ಹೆಣ್ಣುಮಗಳೊಬ್ಬಳನ್ನು ಪ್ರೌಢಶಾಲೆಯ ನಂತರ, ಆಕೆಯ ಪೋಷಕರು, ಅವಳು ತನ್ನ ಆರನೆಯ ವಯಸ್ಸಿನಲ್ಲಿ ನೋಡಿದ್ದ ಸಂಬಂಧಿಕರ ಹುಡುಗನೊಂದಿಗೆ ಮದುವೆ ಮಾಡುವ ಪ್ರಸ್ತಾಪ ಮುಂದಿಡುತ್ತಾರೆ. ದೆಹಲಿಯಲ್ಲಿ ಬೆಳೆದ ಆ ಹುಡುಗಿ ಕಾಲೇಜಿಗೆ ಹೋಗುವ, ತನ್ನಮನಸ್ಸಿಗೆ ಹಿಡಿಸುವ ಉಡುಗೆ ತೊಡುವ, ತನ್ನ ವಯಸ್ಸಿನ ಗೆಳೆಯರ ಒಡನಾಟದ ಸಂಭ್ರಮದಲ್ಲೇ ಇರುತ್ತಾಳೆ. ಹೇಗೋ ತನ್ನ ಅಪ್ಪ ಅಮ್ಮಂದಿರನ್ನು ಒಪ್ಪಿಸಿ ದೆಹಲಿಯ ಪ್ರತಿಷ್ಠಿತ ಕಾಲೇಜೊಂದಕ್ಕೆ ಸೇರುತ್ತಾಳೆ. ಕಾಲೇಜಿನಲ್ಲಿ ಆಭಿಶೇಕ್ ಸೇತ್  ಎಂಬ ಹುಡುಗನೊಂದಿಗೆ ಪ್ರೇಮಾಂಕುರವಾಗುತ್ತದೆ. ಮುಂದೆ, ಅಭಿಶೇಕ್ ಸೇತ್ ಶಿಕ್ಷಣ ಮುಗಿಸಿ ರಾಷ್ಟ್ರಪತಿ ಭವನದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕೆಲಸಕ್ಕೆ ಸೇರುತ್ತಾನೆ.  ತನ್ನ ಪ್ರಿಯತಮೆಯೊಂದಿಗೆ ಜೀವನವನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಾನೆ. ಈ ನಡುವೆ ಭಾವನಾಳ ಮನೆಯಲ್ಲಿ ಅದೇ ಮದುವೆಯ ಪ್ರಸ್ತಾಪವಾಗುತ್ತದೆ; ಅವಳ ಇಚ್ಛೆಯನ್ನು ಲೆಕ್ಕಿಸದೆ ನಿಶ್ಚಿತಾರ್ಥವೂ ನಿಗದಿಯಾಗುತ್ತದೆ. ಇತ್ತ ಅಭಿಶೇಕ್ ಮತ್ತು  ಭಾವನಾ ತಮ್ಮ ಕುಟುಂಬಗಳು ಅವರ ಪ್ರೇಮಕ್ಕೆ ಸಮ್ಮತಿ ನೀಡುವುದಿಲ್ಲ ಎಂಬ ವಿಷಯ ಖಾತ್ರಿಯಾಗುತ್ತಿದ್ದಂತೆ ಆತಂಕಗೊಳ್ಳುತ್ತಾರೆ; ಅವಳ ನಿಶ್ಚಿತಾರ್ಥದ ದಿನ ಹತ್ತಿರವಾದಂತೆ  ಚಡಪಡಿಸತೊಡಗುತ್ತಾರೆ. ಒಮ್ಮೆ ಮದುವೆ ಮಾಡಿಕೊಂಡರೆ ಕ್ರಮೇಣ ಪೋಷಕರು ಒಪ್ಪಿಕೊಳ್ಳುತ್ತಾರೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ; ನಂತರ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅಭಿಶೇಕನ ಮನೆಗೆ ಬರುತ್ತಾರೆ. ಅಭಿಶೇಕನ ಅಪ್ಪ ಅಮ್ಮರಿಗೆ ಒಮ್ಮೆಗೇ ಅಚ್ಚರಿ, ಗಾಬರಿ. ಇದ್ದಕ್ಕಿಂದಂತೆ ಒಬ್ಬಳು ಹುಡುಗಿಯನ್ನು ಧುತ್ತನೆ ನಿಲ್ಲಿಸಿ, “ಇವಳು ನಿಮ್ಮ ಸೊಸೆ, ನನ್ನ ಹೆಂಡತಿ” ಎಂದು ಹೇಳುತ್ತಿರುವ ಮಗನ ಮಾತನ್ನು ನಂಬದವರಾಗುತ್ತಾರೆ.  ಮಗನ ಈ ನಡೆಯಿಂದ ಬೇಸರವಾದರೂ ತೋರಗೊಡದೆ, ಸಾವರಿಸಿಕೊಂಡು ವಿಷಯವೇನೆಂದು ತಿಳಿದುಕೊಳ್ಳುತ್ತಾರೆ. ನಂತರ ಹುಡುಗಿಯ ಅಪ್ಪ ಅಮ್ಮರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.  ಭಾವನಾರ ಪೋಷಕರು ಧೃತಿಗಡದೆ ಅಭಿಶೇಕನ ಮನೆಗೆ ಬಂದು ಇನ್ನೊಂದು ವಾರದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡುವುದಾಗಿ ನಂಬಿಸಿ ಮಗಳನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾವನಾ ತನ್ನ ಪ್ತಿಯಕರನನ್ನು ಅಗಲಿ ವಾಪಾಸು ತನ್ನ ಮನೆಗೆ ಬರುತ್ತಾಳೆ. ಮನೆಯಲ್ಲಿ ಮೆಲ್ಲಗೆ ಅಪ್ಪ, ಅಮ್ಮ, ಚಿಕ್ಕಪ್ಪ ಮತ್ತು ಉಳಿದ ಎಲ್ಲರ ಸಮ್ಮುಖದಲ್ಲಿ ಭಾವನಾಳ  ಅಂತರ ಜಾತಿ ವಿವಾಹದ ಆಗು ಹೋಗುಗಳ ವಿಷಯ ಚರ್ಚೆಗೆ ಬರುತ್ತದೆ. ಸಂಬಂಧಿಕರೆಲ್ಲರೂ ಅದು ತಮ್ಮ ಮೇಲೆ, ತಮ್ಮ ಕುಟುಂಬದ ಮೇಲೆ, ಕಡೆಗೆ ತಮ್ಮ ವಂಶದ ಮೇಲೆಯೇ ಆದಂತಹ ಅತ್ಯಾಚಾರ, ಅದರಿಂದಾದ ಅವಮಾನ ಎಂದು ಭಾವಿಸುತ್ತಾರೆ. ಈ ಘಟನೆಯು ತಮ್ಮ ವಂಶಸ್ಥರ ಎಲ್ಲ ಹೆಣ್ಣು ಮಕ್ಕಳಮೇಲೆ ಕಳಂಕ ತಂದು ಮುಂದೆ ಅವರ ವಿವಾಹಕ್ಕೆ ಅಡ್ಡಿ ತರಬಹುದೆಂಬ ಅಂದಾಜಿಗೆ ಬರುತ್ತಾರೆ. ಇನ್ನು ಇದನ್ನು ತಪ್ಪಿಸಲು ಈ ಮದುವೆಯನ್ನು ಕಡೆಗಣಿಸಿ ತಮ್ಮ ಜಾತಿಯೊಳಗೇ ಮರು ಮದುವೆ ಮಾಡುವ ಹಂಚಿಕೆ ಸಿದ್ಧಪಡಿಸುತ್ತಾರೆ. ಇದನ್ನು ಕೇಳಿದ ಭಾವನ ಸಿಡಿದೇಳುತ್ತಾಳೆ; ತಾನು ಪ್ರಾಪ್ತ ವಯಸ್ಕಳಾಗಿದ್ದು, ತನ್ನ ಇಚ್ಛೆಯಂತೆ, ತನ್ನ ಹಕ್ಕಿನಂತೆ ಕಾನೂನಿನಡಿಯಲ್ಲಿ ತಾನು ಮದುವೆಯಾಗಿದ್ದು ಅದನ್ನು ತಪ್ಪಿಸಲು ಯಾರಿಗೂ ಹಕ್ಕಿಲ್ಲವೆಂದು ವಾದಿಸುತ್ತಾಳೆ; ಹಾಗೇನಾದರೂ ಮಾಡಿದರೆ ಮನೆಯವರನ್ನು, ಕುಟುಂಬದವರನ್ನು ಕೋರ್ಟಿಗೆ ಎಳೆಯುವುದಾಗಿ ಹೇಳುತ್ತಾಳೆ. ಈ ವಾಗ್ಯುದ್ಧದ ನಡುವೆ ಭಾವನಾಳ ಚಿಕ್ಕಪ್ಪ ಅಭಿಶೇಕ್ ಗೆ ಫೋನ್ ಮಾಡಿ ಅವಳನ್ನು ಮರೆಯದಿದ್ದರೆ ಶೂಟ್ ಮಾಡುವುದಾಗಿ ಧಮಕಿಹಾಕುತ್ತಾನೆ.  ಇದಾವುದಕ್ಕೂ ಭಾವನಾ ಜಗ್ಗುವುದಿಲ್ಲ. ಅಂದಿನ ರಾತ್ರಿ ಅವಳ ಅಪ್ಪ, ಅಪ್ಪ, ಚಿಕ್ಕಪ್ಪ ಮತ್ತು ಸಂಬಂಧಿಕರೆಲ್ಲರೂ ಸೇರಿ ತಮ್ಮ ಕುಟುಂಬದ, ವಂಶದ ಮರ್ಯಾದೆಯನ್ನು ಕಾಪಾಡುವ  ಕರಾಳ ಹಂಚಿಕೆಗೆ ತಯಾರಾಗುತ್ತಾರೆ. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಭಯಾನಕವಾಗಿ ಅವಳನ್ನು ಉಸಿರುಗಟ್ಟಿ ಸಾಯಿಸಲಾಗುತ್ತದೆ. ಕುಟುಂಬದ, ವಂಶದ ಮರ್ಯಾದೆ ಉಳಿಯಿತು ಎಂಬ ಹಮ್ಮಿನಲ್ಲಿ ಸಂಬಂಧಿಕರು, ಪೋಷಕರು ನಿಟ್ಟುಸಿರು ಬಿಡುತ್ತಾರೆ.

ಏನಿದು ಈ ಮರ್ಯಾದೆ? ತನ್ನ ಕರುಳ ಬಳ್ಳಿಯನ್ನೇ ಕೊಂದು ಉಳಿಸಿಕೊಳ್ಳುವ ಈ ಮರ್ಯಾದೆ ಎಂಥದ್ದು? ಇವೆಲ್ಲವನ್ನು ಕೆದಕಿ ಕುಳಿತರೆ ನಾವು ನಿಂತಲ್ಲಿಗೇ ಬಂದು ನಿಲ್ಲುತ್ತೇವೆ. ಹೆಮ್ಮೆಯಿಂದ ನಮ್ಮದೆಂದು ಹೇಳಿಕೊಳ್ಳುವ ನಮ್ಮ ಸಂಸ್ಕೃತಿಯು ಮೊದಲಿಂದಲೂ ಹೆಣ್ಣುಮಕ್ಕಳನ್ನು ಕುಟುಂಬದ, ಗೌರವದ ಸ್ವತ್ತುಗಳನ್ನಾಗಿ ಪೋಷಿಸಿಕೊಂಡು ಬಂದಿದೆ. ಹೀಗಾಗಿ ನಮ್ಮ ಸಮಾಜವು ಪುರುಷ ಪ್ರಧಾನವಾಗಿ, ಪುರುಷರು ಅವರನ್ನು ತಮ್ಮ  ಪ್ರತಿಷ್ಠೆಗೆ, ಅಲಂಕಾರಕ್ಕೆ ಶೋಭಿಸುವಂತೆ ಆಭರಣಗಳಂತೆ, ಸ್ವತ್ತುಗಳಂತೆ ಬಳಸಿಕೊಂಡು ಬರುತ್ತಿದ್ದಾರೆ. ಇವೆಲ್ಲವೂ ಕಾಲಾನಂತರದಲ್ಲಿ ಸರ್ವೋತ್ತಮ ಮೌಲ್ಯಗಳಾಗಿ, ತನ್ಮೂಲಕ ಪುರುಷರ ಪ್ರತಿಷ್ಠೆಯ ಪ್ರತೀಕಗಳಾಗಿ ಎಲ್ಲರ ಮನಸ್ಸುಗಳನ್ನು ಗಾಢವಾಗಿ ಆವರಿಸಿ ಕುಂತಿವೆ. ಸ್ತ್ರೀಯರಲ್ಲೂ ತಮ್ಮಲ್ಲಿರುವಂತೆ ಒಂದು ಜೀವವಿದೆ, ಹೃದಯವಿದೆ, ಅದರೊಳಗೊಂದು ಆಸೆಯಿದೆ, ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡುವ ಬಯಕೆಯಿದೆ ಎಂದು ಎಂದೂ ಭಾವಿಸಿದಂತಿಲ್ಲ. ಹಿಂದೆ ಯುದ್ಧನಿರತ ಮಹಾರಾಜರು, ಸಾಮ್ರಾಟರಿಂದ ತಮ್ಮ ರಾಜ್ಯ ಉಳಿಸಿಕೊಳ್ಳಲು ಅವರ ಅಧೀನಕ್ಕೆ ಒಳಪಟ್ಟು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ತಮ್ಮ ಅಧೀನತೆಯ ಸಂಕೇತವಾಗಿ ಸಾಮ್ರಾಟರಿಗೆ ಉಪ ಪತ್ನಿಯರನ್ನಾಗಿ ಮದುವೆ ಮಾಡಿ ಕೊಡುವ ಸಂಪ್ರದಾಯವಿತ್ತು. ರಾಜ್ಯವೊಂದರ ರಾಜಕುಮಾರನ ರಾಣಿಯಾಗಿ, ಮುಂದೆ ಆ ರಾಜ್ಯದ ಪಟ್ಟದ ರಾಣಿಯಾಗಬೇಕೆಂದು  ಹಂಬಲಿಸುತ್ತಿದ್ದ ರಾಜ ಮನೆತನದ ಹೆಣ್ಣುಮಕ್ಕಳು ಸಾಮ್ರಾಟನ ಜನಾನಾದಲ್ಲಿ ಇಂಥ ಅದೆಷ್ಟೋ  ಉಪ ಪತ್ನಿಯರೊಂದಿಗೆ ಸಾಮ್ರಾಟನ ಲಕ್ಷ್ಯವಿಲ್ಲದೆ ಕಾಲ ದೂಡಬೇಕಾಗುತ್ತಿತ್ತು. ತಮ್ಮ ಪಿತೃಗಳ ರಾಜಕಾರಣದಲ್ಲಿ ಈ ನತದೃಷ್ಟ ರಾಜ ಕುವರಿಯರು ಜೀವವಿಲ್ಲದ ಪಗಡೆಯ ಕಾಯಿಗಳಾಗಿ ಹೋಗುತ್ತಿದ್ದರು. ಹೀಗೆಯೇ ಮೊಘಲ್ ಸಾಮ್ರಾಟರ ಕುಟುಂಬದ ರಾಜಕುವರಿಯರು  ಮದುವೆಯಾಗಕೂಡದೆಂಬ ವಿಚಿತ್ರ ನಿಯಮವಿತ್ತು! ತಮ್ಮ ಮೋಜಿಗೆ ನೂರಾರು ಉಪ ಪತ್ನಿಯರನ್ನು ತಮ್ಮ ಜನಾನದಲ್ಲಿ ಇಟ್ಟುಕೊಳ್ಳುತ್ತಿದ್ದ ಮೊಘಲ್ ಸಾಮ್ರಾಟರು, ಹಿಂದಿನ ಯಾವುದೋ ಪದ್ದತಿಗೆ ಗಂಟುಬಿದ್ದು ತಮ್ಮ ಪುತ್ರಿಯರಿಗೆ ಮದುವೆ ಮಾಡದಷ್ಟು ನಿರ್ದಯಿಗಳಾಗಿದ್ದರು.  ತನ್ನ ಹದಿನಾಲ್ಕನೇ ಮಗುವಿನ ಪ್ರಸವದಲ್ಲಿ ತೀರಿಕೊಂಡ ಮಹಾರಾಣಿ ಮುಮ್ತಾಜ್ ಮಹಲಳ ಪ್ರೀತಿಯ ನೆನಪಿಗೆ ಭವ್ಯವಾದ ತಾಜ್ ಮಹಲನ್ನೇ ಕಟ್ಟುವ ಸರ್ವ ಸಾಮ್ರಾಟನಾದ ಶಹಜಹಾನ್  ಇಂಥ ಸಂಪ್ರದಾಯಕ್ಕೆ ಕಟ್ಟುಬಿದ್ದು ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡದೆ ಹೋಗುತ್ತಾನೆ. ಪರಮೋಚ್ಛ ಅಧಿಕಾರವನ್ನು ಹೊಂದಿದ್ದ ಸರ್ವಶಕ್ತನಾಗಿದ್ದ ಶಹಜಹಾನ್, ತನ್ನ ಉಳಿದ ಪತ್ನಿಯರನ್ನು ಕಡೆಗಣಿಸಿ, ತನ್ನ ಎಲ್ಲ ಪುತ್ರಿಯರಲ್ಲಿ ಅತ್ಯಂತ ಪ್ರೀತಿಗೆ ಪಾತ್ರಳಾದ ಮೊದಲ ಮಗಳು ಜಹಾನರಾಳನ್ನು ಮಹಾರಾಣಿಯನ್ನಾಗಿ ಮಾಡುತ್ತಾನೆ; ಆದರೆ ಸಾಮ್ರಾಟ್ ಅಕ್ಬರನ ಕಾಲದಲ್ಲಿ ಹುಟ್ಟಿದ ಸಂಪ್ರದಾಯವೊಂದಕ್ಕೆ ಗಂಟುಬಿದ್ದು ಅವಳು ಅದಮ್ಯವಾಗಿ ಪ್ರೀತಿಸುತ್ತಿದ್ದ ಒಬ್ಬ ಯುರೋಪಿಯನ್ ವೈದ್ಯನನ್ನು ಮದುವೆಯಾಗಲು ಅವಕಾಶ ಕಲ್ಪಿಸಲೇ ಇಲ್ಲ. ಅವಳು ಮದುವೆಯಾಗದೆ ಅವನ ನೆನಪಿನಲ್ಲಿಯೇ ಉಳಿದಳು. ತನ್ನ ರಾಜಭೋಗವನ್ನು ಶಪಿಸಿದಳು, ತಾನು ಸತ್ತ ನಂತರ ತನ್ನ ಗೋರಿಯು ಎಲ್ಲ ರಾಜಭೋಗದಿಂದ ಮುಕ್ತವಾಗಿರುವಂತೆ ಬಯಸಿ ಗುಂಬಜ್ ಗಳಿಲ್ಲದ ಸಾಮಾನ್ಯ ಜನರ ಗೋರಿಯಂತೆ  ಸದಾ ಆಕಾಶವನ್ನು ನೋಡುವಂತಿರಲಿ ಎಂದು ಬಯಸುತ್ತಾಳೆ. ಸಾಮ್ರಾಜ್ಞಿಯಾಗಿದ್ದ ಜಹಾನರಾಳ ಗೋರಿಯು ಇಂದಿಗೂ ದೆಹಲಿಯಲ್ಲಿ ಗುಂಬಜ್ ಗಳಿಲ್ಲದ ಸಾಮಾನ್ಯ ಗೋರಿಯಂತೆಯೇ ಇದೆ.

Jahanara's Grave Nizamuddin Dargah New Delhi Sahil Ahuja Pixelated Memories (1)

ನಮ್ಮ ಒಳಿತಿಗೆ ಇಂದು ನಾವು ಕಟ್ಟಿಕೊಳ್ಳುವ ಆಚರಣೆಗಳು ಕಾಲಾನಂತರದಲ್ಲಿ ಬಲಿಷ್ಠ ಸಂಪ್ರದಾಯಗಳಾಗಿ, ನಮ್ಮ ಸಂಸ್ಕೃತಿಯ ಭಾಗವಾಗಿ ನಮ್ಮ ಕಾಲನ್ನೇ ಕಚ್ಚುವ ಹಲ್ಲಾಗುತ್ತಿವೆ.

ಸಂಸ್ಕೃತಿಯು ಆಕಳ ಕೆಚ್ಚಲಿನಂತಿರದೆ ಹುಲಿಯ ಹಲ್ಲಾಯಿತೆ?

ಖಲೀಲ್ ಗಿಬ್ರಾನನ ಈ ಸಾಲುಗಳು ನೆನಪಾಗುತ್ತವೆ:

Your children are not your children.
They are the sons and daughters of Life’s longing for itself.
They come through you but not from you,
And though they are with you yet they belong not to you.

You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow,
which you cannot visit, not even in your dreams.
You may strive to be like them,
but seek not to make them like you.
For life goes not backward nor tarries with yesterday.

You are the bows from which your children
as living arrows are sent forth.
The archer sees the mark upon the path of the infinite,
and He bends you with His might
that His arrows may go swift and far.
Let your bending in the archer’s hand be for gladness;
For even as He loves the arrow that flies,
so He loves also the bow that is stable.

ಸಾರ್ವಭೌಮತ್ವದ ಎಲ್ಲೆ ಮೀರಿ

ನಮ್ಮ ಹಳೆಯ ವೈರಿಯೊಡನೆ ಸ್ನೇಹದ ಮಾತುಕತೆಗೆ ಕುಳಿತುಕೊಳ್ಳುವ ಸಂಧರ್ಭ ಬಂದರೆ ಕೂಡಲೇ ಅಧೀರರಾಗುತ್ತೇವೆ. ಅದನ್ನು ಸಾಧ್ಯವಾದಷ್ಟು ತಪ್ಪಿಸುವುದಕ್ಕೆ ಪ್ರಯತ್ನಿಸುತ್ತೇವೆ; ಅದು ಅನಿವಾರ್ಯವಾದರೆ ಮೈಯೆಲ್ಲ ಕಣ್ಣಾಗಿ ಎಲ್ಲ ರೀತಿಯ ರಕ್ಷಣಾ ತಂತ್ರದೊಂದಿಗೆ, ಯಾವ ಕ್ಷಣದಲ್ಲೂ ಬಂದೊದಗುವ ತುರ್ತಿಗೆ ಸಿದ್ಧರಾಗಿ ಕೂರುತ್ತೇವೆ. ನಮ್ಮ ಎಲ್ಲ ಇಂದ್ರಿಯಗಳು ಬಂದೊದಗಬಹುದಾದ ಅಪಾಯದ ಸುಳಿವಿನ ನಿರೀಕ್ಷೆಯಲ್ಲೇ ಉಳಿಯುತ್ತವೆ. ಇಂಥ ಆತಂಕ ಭರಿತ ಸ್ಥಿತಿಯಲ್ಲಿ ಮಾತಿನ ನಡುವಿನ ಸ್ನೇಹದ ಮಾತುಗಳು ಕೇಳದೆ ಹೋಗುತ್ತವೆ. ಒಳ್ಳೆಯ ಮಾತುಗಳೆಲ್ಲ ಪಿತೂರಿಯಂತೆ ಭಾಸವಾಗುತ್ತವೆ.  ಅಪನಂಬಿಕೆಯ ಈ ಹೊಸಿಲಲ್ಲಿ ಯಾವ ಮಾತುಕತೆಗಳು  ಕುದುರಲಾರವು.

Sovereignty Pic

ಮೊನ್ನೆ, 2014 ರ ಸೆಪ್ಟೆಂಬರ್ 15 ರಂದು ನಲ್ಲಿ ಚೀನಾ ದೇಶದ ಅಧ್ಯಕ್ಷರು ಭಾರತಕ್ಕೆ ಭೇಟಿಯಿತ್ತ ಸಮಯದಲ್ಲಿ ಇಂಥದ್ದೇ ಆತಂಕ ಭರಿತ ಕ್ಷಣಗಳಿದ್ದವು. ಆರಂಭವಾದ ದ್ವಿಪಕ್ಷೀಯ ಮಾತುಕತೆಯ ನಡುವಲ್ಲಿ  ಚೀನಾದ ಸೇನೆಯು ಲಡಾಕ್ನ ಸೀಮೆಯೊಳಗೆ  ಕಾಣಿಸಿಕೊಂಡಿದ್ದು ಎರಡೂ ದೇಶದ ಮುಖ್ಯಸ್ಥರಿಗೆ ಇರುಸು ಮುರುಸಾಯಿತು. ತಕ್ಷಣ ಇದನ್ನು  ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ವಿಷಯವನ್ನಾಗಿ ಗ್ರಹಿಸಲಾಯ್ತು.  ನಮ್ಮ ಪ್ರಧಾನ ಮಂತ್ರಿಗಳು ತಾವೇ ಮುಂದಾಗಿ, ಇಂತಹ ಸಣ್ಣ ಸಣ್ಣ ಘಟನೆಗಳು ಬಹು ದೊಡ್ಡ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ; ಹಲ್ಲೊಂದರ ನೋವು ಇಡೀ ಶರೀರವನ್ನೇ ನಿಶ್ಕ್ರಿಯಗೊಳಿಸುತ್ತದೆ ಎಂದು ಖಡಕ್ಕಾಗಿ ಚೀನಾದ ಅಧ್ಯಕ್ಷರಿಗೆ ತಿಳಿಸಲೇಬೇಕಾಯ್ತು. ಇದಕ್ಕೆ ಪ್ರತಿಯಾಗಿ ಚೀನಾದ ಅಧ್ಯಕ್ಷರು ಲಡಾಕ್ ನಿಂದ ಹಿಂದೆಗೆಯಲು ತಮ್ಮ ಸೇನೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ 24 ಗಂಟೆಗಳ ತರುವಾಯವೂ ಅವರ ಸೇನೆಯು ಹಿಂದಿರುಗದಿದ್ದುದು ನಿಜಕ್ಕೂ ಆತಂಕಕಾರಿಯಾಗಿತ್ತು.  ಇದನ್ನು ಎರಡೂ ದೇಶಗಳು ಸಾಧಿಸಬಹುದಾಗಿದ್ದ ಉತ್ತಮ ರಾಜತಾಂತ್ರಿಕ ಸಂಬಂಧಗಳು ತನ್ಮೂಲಕ ಆಗಬಹುದಿದ್ದ ಆರ್ಥಿಕ ಒಪ್ಪಂದಗಳು, ಪರಸ್ಪರ ಅಭಿವೃದ್ಧಿಕಾರ್ಯಗಳು ಮೂಲೆಗೆ ಬಿದ್ದು ಎರಡೂ ದೇಶಗಳು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಬಹುದಾಗಿದ್ದ ಈ ಹೊತ್ತಿನ, ಅಷ್ಟೇ ಏಕೆ, ಈ ಶತಮಾನದ, ಕಳೆದುಕೊಂಡ ಒಂದು ಅಭೂತಪೂರ್ವ ಅವಕಾಶವೆಂಬುದಾಗಿ ವಿಷ್ಲೇಶಿಸಲಾಯ್ತು.  ಎರಡೂ ದೇಶಗಳೂ ಒಂದೊಂದು ರೀತಿಯಲ್ಲಿ ಶಕ್ತಿಯುತವಾಗಿವೆ. ಚೀನಾ ದೇಶವು ಇಂದು ಮೂಲಭೂತ ಸೌಕರ್ಯನಿರ್ಮಾಣದ, ಉತ್ಪಾದನೆಯ ದೈತ್ಯ ಶಕ್ತಿಯಾಗಿ ನಿಂತಿದೆ; ಸಮರ್ಥವಾಗಿ ಸೂಪರ್ ಹೈವೆಗಳನ್ನು, ಸೂಪರ್ ಫಾಸ್ಟ್ ರೈಲು ದಾರಿಗಳನ್ನು, ಟ್ರೈನುಗಳನ್ನು, ಕನಿಷ್ಠ ವೆಚ್ಚದ ಪವರ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.  ಅಷ್ಟೇ ಅಲ್ಲ ಇವುಗಳ ನಿರ್ಮಾಣಕ್ಕೆ ಬೇಕಾಗುವ ಆರ್ಥಿಕ ಸಹಕಾರವನ್ನು ನೀಡುವ ಶಕ್ತಿಯನ್ನೂ ಹೊಂದಿದೆ.  ಭಾರತಕ್ಕೆ ತುರ್ತಾಗಿ ಈಗ ಇಂಥಹ ಸೂಪರ್ ಹೈವೆಗಳು, ಸೂಪರ್ ಫಾಸ್ಟ್ ಟ್ರೈನುಗಳು, ಪವರ್ ಸ್ಟೇಷನ್ ಗಳ, ಅವುಗಳ ನಿರ್ಮಾಣಕ್ಕೆ ತಗಲುವ ಆರ್ಥಿಕ ಸಂಪನ್ಮೂಲಗಳ ಅಗತ್ಯವಿದೆ.  ಹಾಗೆಯೇ ಭಾರತದಲ್ಲಿ ಚೀನಾಕ್ಕೆ ಈ ಹೊತ್ತಿಗೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಶೈಕ್ಷಣಿಕ ಸಂಪತ್ತು, ತಂತ್ರಾಂಶ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಮುಖ್ಯವಾಗಿ ಚೀನಾದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್ ಶಿಕ್ಷಕರ ಅಗತ್ಯವಿದೆ. ಚೀನಾದೇಶವು ಭೌಗೋಳೀಕರಣದ ಈ ಹೊತ್ತಿನಲ್ಲಿ ಇಂಗ್ಲೀಷ್ ಶಿಕ್ಷಣದ ಅಗತ್ಯವನ್ನು  ಚೆನ್ನಾಗಿ ಮನಗಂಡಿದೆ. ಹೀಗೆ  ಎರಡೂ ದೇಶಗಳು ತಮ್ಮ ತಮ್ಮ ಸಾಮರ್ಥ್ಯಗಳ ಸಂಕ್ರಮಣದಲ್ಲಿ ಜೊತೆಗೂಡಿ ಹಿಂದೆಂದೂ ಕಾಣದ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣುವ, ತನ್ಮೂಲಕ ಜಾಗತಿಕ ದೈತ್ಯ ಶಕ್ತಿಯಾಗಿ ಹೊರ ಹೊಮ್ಮುವ ಕಾಲಘಟ್ಟದಲ್ಲಿ ಬಂದು ನಿಂತಿವೆ.   ಸಂಕ್ರಮಣದ ಈ ಹೊತ್ತಿನ, ಈ ಶತಮಾನದ ಅವಕಾಶವು ಉಭಯ ದೇಶಗಳ ಆ ‘ವೆಸ್ಟ್ ಫಾಲಿನ್ ಸಾರ್ವಭೌಮತ್ವದ’ ಪ್ರತಿಷ್ಠೆಯ ಗುಂಗಿನಲ್ಲಿ ಕಳೆದು ಹೋಯಿತೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಅಷ್ಟಕ್ಕೂ ಈ ಸಾರ್ವಭೌಮತ್ವದ ಹಿಡಿಕೆಗೆ, ಅದು ಒಡ್ಡುವ ಸಂದಿಗ್ಧಕ್ಕೆ ದೇಶಗಳು ಸಿಲುಕಿ ಹೀಗೆ ನಲುಗುವುದೇಕೆ? ಅಭಿವೃದ್ಧಿಗೆ ಹಿನ್ನಡೆಯಾದರೂ ಸರಿ, ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಕೂಡದು ಎಂದು ಚಡಪಡಿಸುತ್ತೇವೆ.  ಏನಿದು ಸಾರ್ವಭೌಮತ್ವ? ಇದರ ಮೂಲವೇನು? ಮೌಲ್ಯವೇನು ಎಂದು ಕೆದಕಿದರೆ ಇತಿಹಾಸವು ನಮ್ಮನ್ನು ಯುರೋಪಿನ ಹದಿನೇಳನೇ ಶತಮಾನದ ಪೂರ್ವಾರ್ಧಕ್ಕೆ ತಂದು ನಿಲ್ಲಿಸುತ್ತದೆ. ತಮ್ಮ ದೇಶಗಳ, ಗಡಿಗಳ ಸ್ವಾಮ್ಯದ ಕಲಹದಲ್ಲಿ ಸಿಲುಕಿ  ಸತತ ಮುವ್ವತ್ತು ವರ್ಷಗಳ ಯುದ್ಧದಲ್ಲಿ ಕಂಗೆಟ್ಟು ಹೋಗಿದ್ದ  ಅಂದಿನ ರೋಮ್, ಸ್ಪೇನ್, ಫ್ರಾನ್ಸ್, ಸ್ವೀಡನ್ ಮತ್ತು ಡಚ್ ದೇಶಗಳು ಕೊನೆಗೆ ಒಂದು ಒಮ್ಮತಕ್ಕೆ ಬರುತ್ತವೆ. ಅದನ್ನು 1648 ರ ವೆಸ್ಟ್ ಫಾಲಿಯನ್ ಶಾಂತಿ ಒಪ್ಪಂದವೆಂದು ಕರೆಯಲಾಗುತ್ತದೆ. ಅದರಂತೆ. ಈ ದೇಶಗಳು ಆಯಾ ದೇಶಗಳ ರಾಜ್ಯ, ಗಡಿ, ಆಂತರಿಕ ರಾಜಕೀಯ, ಧಾರ್ಮಿಕ, ಆರ್ಥಿಕ ವಿಚಾರಗಳಲ್ಲಿ ಬೇರೆಯವರು ಹಸ್ತಕ್ಷೇಪ ಮಾಡದಂತೆ ತಾವೇ ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದು ಮತ್ತು ಉಳಿದ ದೇಶಗಳನ್ನು ಅದರಂತೆಯೇ ಗೌರವಿಸುವುದು.  ಈ ಒಡಂಬಡಿಕೆಯ ನಂತರ ಬಹುತೇಕ ಯುರೋಪಿನಲ್ಲಿ ಇಂತಹ ಕಲಹಗಳು ನಿಂತು ದೇಶಗಳು ಅಭಿವೃದ್ಧಿಯತ್ತ ಗಮನ ಹರಿಸತೊಡಗುತ್ತವೆ. ಹೀಗೆ ಅಂದು ಯುರೋಪಿನ ದೇಶಗಳು  ಪಡೆದ ಸಾರ್ವಭೌಮತ್ವವನ್ನು ವೆಸ್ಟ್ ಫಾಲಿಯನ್ ಸಾರ್ವಭೌಮತ್ವವೆಂದು ಕರೆಯಲಾಗುತ್ತದೆ. ಈ ಒಡಂಬಡಿಕೆಯಿಂದಲೇ ಮುಂದೆ ಡಚ್ಚರು,  ಫ್ರೆಂಚರು,  ಪೋರ್ಚುಗೀಸರು ಮತ್ತು ಇಂಗ್ಲೀಷರು ತಮ್ಮ  ವಸಾಹತುಗಳನ್ನು ಯುರೋಪಿನಾಚೆ ಸ್ಥಾಪಿಸಿದ್ದು. ಹೀಗೆ ಇವರೆಲ್ಲ ಒಬ್ಬೊಬ್ಬರಾಗಿ ಭಾರತಕ್ಕೂ ಬಂದು ಅಂತಿಮವಾಗಿ ಇಂಗ್ಲೀಷರು ಇಲ್ಲಿ ನೆಲೆ ನಿಂತರು. ಹೀಗೆ ಯುರೋಪಿನಲ್ಲಿ ಭೌಗೋಳಿಕವಾಗಿ ಚಿಕ್ಕದಾಗಿದ್ದ ದೇಶಗಳು ತಮ್ಮ ನಾಡಿನ ಶಾಂತಿಗೆ, ಅಭಿವೃದ್ಧಿಗೆ ನೆರೆರಾಷ್ಟ್ರಗಳೊಂದಿಗೆ ಸಹಬಾಳ್ವೆಯ ಒಂಡಂಬಡಿಕೆಯೊಂದಿಗೆ ತಮ್ಮ ಸಾರ್ವಭೌಮತ್ವವನ್ನು ಒಂದು ಪ್ರತಿಷ್ಠೆಯ ವಿಷಯವನ್ನಾಗಿಸದೆ, ಅದನ್ನು ಮುಂದೆ ಆರ್ಥಿಕ ಭೌಗೋಳೀಕರಣದ ಹೊತ್ತಿಗೆ ಇನ್ನಷ್ಟು ವಿಕಾಸ ಹೊಂದುವಂತೆ ಮಾಡಿ ಇಂದು ಆ ದೇಶಗಳು ಸಮಗ್ರ ಯುರೋಪಿನ ಆರ್ಥಿಕ ಅಭಿವೃದ್ಧಿಗೆ ಯುರೋಪಿನಾದ್ಯಂತ ಒಂದೇ ಕರೆನ್ಸಿಯನ್ನು ಬಳಸುವತ್ತ ಸಾಗಿವೆ. ಇಂದು ಯುರೋಪಿನ ದೇಶಗಳಲ್ಲಿ  ನಮ್ಮ ನೆರೆಹೊರೆಯ ದೇಶಗಳಲ್ಲಿರುವಂತೆ ಆತಂಕದ ಪರಿಸ್ಥಿತಿಯಿಲ್ಲ. ಏಷ್ಯಾದ ದೇಶಗಳು ಇನ್ನೂ 17 ನೇ ಶತಮಾನದ ವೆಸ್ಟ್ ಫಾಲಿಯನ್ ಸಾರ್ವಭೌಮತ್ವದ ಹಿಡಿಕೆಯಲ್ಲಿ ಸಿಕ್ಕಿಕೊಂಡು ನಲುಗುತ್ತಿವೆ. ಪರಸ್ಪರ ಅಭಿವೃದ್ಧಿಯ ಅವಕಾಶಗಳನ್ನೂ ತಮ್ಮ ಪ್ರತಿಷ್ಠೆಯಲ್ಲಿ ಹೂತು ಹಾಕುವಂಥ ಮನಸ್ಥಿತಿಯಲ್ಲಿವೆ. ಇದರ ಸಿಲುಕಿನಲ್ಲಿ  ಸಿಕ್ಕಿ ಇಡೀ ಏಷ್ಯಾದಲ್ಲಿ ವೆಚ್ಚವಾಗುವ ರಕ್ಷಣಾ ಬಜೆಟ್ ಸಹ ಏರುತ್ತಿದೆ;  ಇಷ್ಟೂ ಹಣವು ಅಭಿವೃದ್ಧಿಗೆ ದೊರೆತರೆ ಹೇಗೆ ಎಂಬ ಆಲೋಚನೆ ಮೂಡದಷ್ಟು ಗಾಢವಾಗಿ ಕಳೆದುಹೋಗಿವೆ.

ವಸುದೈವಕುಟುಂಬಕಂ ಎಂದರೆ ಇದೇ ಅಲ್ಲವೆ?

ಹಾಗೆಂದು ಇದು ಒಂದು ದೇಶದ ಕೈಯಲ್ಲಿ ಇರುವ ಆಯ್ಕೆಯಲ್ಲ; ನೆರೆಯ ಎಲ್ಲ ದೇಶಗಳೂ ಸಹಕರಿಸಬೇಕು.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಭಾಷಾ ಮಾಧ್ಯಮದ ಸಿಲುಕಿನಲ್ಲಿ ಕನ್ನಡದ ಕಂದಮ್ಮಗಳು

” ದ್ಯಾಮವ್ವಾ ಏನ್ ಮಗನ್ನೂ ಕೆಲ್ಸಕ್ಕೆ  ಕರ್ಕೊಂಬಂದಂಗೈತೆ, ಏನ್ ಇಸ್ಕೂಲ್ ಬಿಡ್ಸಿದ್ಯೊ, ಇಲ್ಲಾ ಅವನೇ ಬಿಟ್ನಾ? ” “ಇಲ್ಲ ಕಣ್ರವ್ವ ಫೇಲಾಗೈತೆ, ಅದಕ್ಕೆ ವೋಗಿಲ್ಲ; ಎಸಲ್ಸಿ ತಂಕಾ ಚೆನ್ನಾಗಿ ಓದ್ತು, ಈಗ ಫೇಲಾಗ್ ಕುಂತೈತೆ. ಬ್ಯಾಡ ಕಣಪ್ಪಾ ಆಂದ್ರು ಕೇಳ್ಲಿಲ್ಲ, ಡಾಕುಟ್ರಾಗ್ತೀನಿ,  ಸುಮ್ಕಿರವ್ವ ಅಂದು ಈಗ ಪಿವುಸೀಲೇ ಫೇಲಾಗ್ ಕುಂತೈತೆ. ಎಲ್ಲಾ ಇಂಗ್ಲೀಸ್ನಾಗೇ ಬರೀಬೇಕಂತೆ, ಇದಕ್ ಇಂಗ್ಲಿಸು ಬರಲ್ದು, ಫೇಲಾಗೈತೆ. ಕನ್ನಡದಾಗೆ ಆಗಿದ್ರೆ ಚನ್ನಾಗ್ ಬರಿತಿದ್ದೆ ಕಣವ್ವ ಅಂತು…;  ನಮ್ ಕನ್ನಡದಾಗೆ ಡಾಕುಟ್ರು ಓದಕಾಗಕಿಲ್ವ?  ಪರಂಗಿಯವ್ರ ಕಾಟ ಯಾವತ್ತು ತೀರ್ತದೋ ಏನೋ? ” ,

Kannada Schools1

ಹೌದಲ್ಲವೆ!  ಕನ್ನಡದಲ್ಲಿ ವಿಜ್ಞಾನ, ಮೆಡಿಸಿನ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಕಲಿಯುವ ಹಾಗೆ ಇದ್ದಿದ್ದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲ ಹುಡುಗರು ನೀರು ಕುಡಿದ ಹಾಗೆ ಓದಿ ಪಾಸಾಗುತ್ತಿದ್ದರು.  ಈ ಸ್ಥಿತಿಗೆ ರಜನಿಸಾರ್ ಸಿನಿಮಾದಂತೆ ಒಂದು ರಂಜನೀಯ ಟ್ವಿಸ್ಟ್ ಕೊಟ್ಟು ಹೀಗೊಂದು ಕಲ್ಪನಾ ಪ್ರಪಂಚಕ್ಕೆ ಹೋಗಿಬರೋಣ.  ಮುಂದಿನ ಶೈಕ್ಷಣಿಕ ವರ್ಷದಿಂದ ನಮ್ಮ ರಾಜ್ಯದ ಎಲ್ಲ ವಿಜ್ಞಾನ, ಇಂಜಿನಿಯರಿಂಗ್, ಮೆಡಿಸಿನ್, ಮ್ಯಾನೇಜ್ಮೆಂಟ್, ಕಾನೂನು ಹಾಗೂ ಇತರೆ ಎಲ್ಲ ಕೋರ್ಸಗಳನ್ನು ಕನ್ನಡ ಮಾಧ್ಯಮದಲ್ಲಿ ಮಾತ್ರ ಭೋಧಿಸಲಾಗುವುದೆಂಬ ಫರ್ಮಾನು ಹೊರಬಿದ್ದು ಅದರಂತೆ ಎಲ್ಲ ವಿದ್ಯಾರ್ಥಿಗಳು ಈ ಕನ್ನಡ ಮಾಧ್ಯಮದ ಕೋರ್ಸುಗಳಿಗೆ ಸೇರಿದರೆ, ಇನ್ನು ಫೇಲಾಗುವ ಸರದಿ ಕನ್ನಡದಲ್ಲಿ ಬರೆಯಲಾಗದೆ ಹೋಗುವ ಕನ್ನಡೇತರ, ಇಂಗ್ಲಿಷ್ ಮಾಧ್ಯಮದ ಹುಡುಗರದು!, ಅಲ್ಲವೆ?  ಹೀಗೆ ಇಂಗ್ಲಿಷ್ ಮಾಧ್ಯಮದ ಹುಡುಗರನ್ನು ಫೇಲಾಗುವಂತೆ ಮಾಡುವ  ರೋಚಕ ಆಲೋಚನೆ ಹುಟ್ಟಿದ್ದೇ ಕನ್ನಡದ ಕಂದಮ್ಮಗಳು ಇಂಗ್ಲಿಷ್ ಬಾರದೆ, ಇಂಗ್ಲಿಷ್ ಮಾಧ್ಯಮದ ಉನ್ನತ ಶಿಕ್ಷಣದ ಕೋರ್ಸುಗಳಲ್ಲಿ  ನಿರಂತರವಾಗಿ  ಫೇಲಾಗುವಂತೆ ಹೊಸೆದು ಇಡಲಾಗಿರುವ ಈ ನಯವಂಚಕ ತಂತ್ರದಿಂದ. ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ, ಕನ್ನಡ ಮಾಧ್ಯಮದಲ್ಲಿ ಕಲಿಯಿರಿ, ಕಲಿಸಿರಿ ಎಂದು ಬೊಬ್ಬೆ ಹೊಡೆಯುವವರು ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕಲಿಯಿರಿ, ಕಲಿಸಿರಿ  ಎಂದೇಕೆ ಹೇಳುವುದಿಲ್ಲ? ಅದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮದ ವಿಜ್ಞಾನ, ಮೆಡಿಸಿನ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ನಲ್ಲಿ  ಉನ್ನತ ಶಿಕ್ಷಣದ ಕೋರ್ಸುಗಳನ್ನು ತೆರೆಯಬೇಕೆಂದು ಏಕೆ ಆಗ್ರಹಿಸುವುದಿಲ್ಲ?  ಈ ಬಗ್ಗೆ ಹಾರಿಕೆಯ ಉತ್ತರ ಕೊಡುವುದೋ ಇಲ್ಲ ಜಾಣ ಮೌನವಹಿಸುವುದು ನಯವಂಚನೆಯಲ್ಲವೆ?  ಕನ್ಡಡದ ಕಂದಮ್ಮಗಳಿಗೇಕೆ ಕಾಣದ ಕಡಲಲ್ಲಿ ಈಜುವ, ಯಾಮಾರಿದರೆ ಮುಳುಗೇ ಹೋಗುವ ಈ ಪರಿಯ ಶಿಕ್ಷೆ?

ಫ್ರಾನ್ಸ್, ಜಪಾನ್, ರಷ್ಯಾ, ಜರ್ಮನಿ ದೇಶಗಳಲ್ಲಿ ತಮ್ಮ ತಮ್ಮ ಭಾಷೆಗಳಲ್ಲಿಯೇ ಎಲ್ಲ ಉನ್ನತ ಶಿಕ್ಷಣವನ್ನು  ಕಲಿಸಿ ಅಪ್ರತಿಮ ವಿಜ್ಞಾನಿ, ಇಂಜಿನಿಯರ್, ಡಾಕ್ಟರ್, ಮ್ಯಾನೇಜರ್, ಲಾಯರ್  ಮುಂತಾದ ವೃತ್ತಿಪರರನ್ನು ಹೊರತಂದಿಲ್ಲವೆ? ಪ್ರಾಥಮಿಕ ಶಿಕ್ಷಣವನ್ನು ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ ನೀಡಬೇಕೆಂದು ಆಗ್ರಹಿಸುವವರು ಮುಂದೆ ಹೋಗಿ ಉನ್ನತ ಶಿಕ್ಷಣವೂ ಕನ್ನಡದಲ್ಲಿ ಇರಬೇಕು, ಕನ್ನಡದ ಉಳಿವಿಗೆ ಹೆಗಲು ಕೊಟ್ಟ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣವು ಅವರಿಗೆ ತಿಳಿದಿರುವ ಮಾಧ್ಯಮವಾದ ಕನ್ನಡದಲ್ಲಿಯೇ  ನಿಲುಕಬೇಕು ಎಂದು ಏಕೆ ಆಗ್ರಹಿಸುವುದಿಲ್ಲ? ಈ ಬಗ್ಗೆ ಇಲ್ಲಿಯವರೆಗೆ ಕನ್ನಡ ಮಾಧ್ಯಮದ ವಕ್ತಾರರು ಪ್ರಸ್ತಾಪ ಮಾಡದಿರುವುದು ಆಶ್ಚರ್ಯ! ಪ್ರಾಥಮಿಕ ಶಿಕ್ಷಣವನ್ನು ಕನ್ನಡದ ಮಾಧ್ಯಮದಲ್ಲಿ ಕಲಿತ ಕನ್ನಡ ಮಕ್ಕಳಿಗೆ, ಸರ್ಕಾರವು ತನ್ನ ವೆಚ್ಚದಲ್ಲಿ ನೀಡುವ ಈ ಶ್ರೇಷ್ಠ  ಉನ್ನತ ಶಿಕ್ಷಣ ಬೇಡವೆಂದೆ?   ನಮ್ಮಲ್ಲಿ ಉನ್ನತ  ಶಿಕ್ಷಣದ ಕೋರ್ಸುಗಳನ್ನು ಕನ್ನಡ ಮಾಧ್ಯಮದಲ್ಲಿ ನೀಡಲು ಸಂಪನ್ಮೂಲಗಳಗಳ ಕೊರತೆ ಇದ್ದರೆ ಅವನ್ನು ಕ್ರೋಢೀಕರಿಸಲು ಯಾವ ಅಡಚಣೆ ಇದೆ?  ಈಗಿನ ಪರಿಸ್ಥಿತಿಯಲ್ಲಿ ಕ್ರೋಢೀಕರಿಸಲು ಸಾಧ್ಯವೇ ಇಲ್ಲ ಎಂದಾದರೆ ಅಥವಾ ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು  ಭಾರತದಂತಹ ಬಹುಭಾಷಾ ದೇಶದಲ್ಲಿ, ಒಂದು ರಾಜ್ಯದವರು ಮತ್ತೊಂದು ರಾಜ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇಂಗ್ಲಿಷನಂಥ ಒಂದು ಸರ್ವ-ಸಂಪರ್ಕ ಭಾಷೆಯಲ್ಲಿ ಇರಬೇಕೆಂದು ಅಪೇಕ್ಷೆ ಪಟ್ಟರೆ ಅದೇ ಭಾಷೆಯಲ್ಲಿ ಎಲ್ಲರೂ ಓದಿ ಬರೆಯುವಂಥ ಸ್ಥಿತಿ ನಿರ್ಮಾಣಮಾಡುವುದು ಕನಿಷ್ಠ ಅಗತ್ಯ ಮತ್ತು ಜವಾಬ್ದಾರಿಯಲ್ಲವೆ?  ಬದಲಿಗೆ ಈ ಸರ್ವ-ಸಂಪರ್ಕ ಭಾಷೆಯಾದ ಇಂಗ್ಲಿಷ್ ಮಾಧ್ಯಮದಲ್ಲಿ ಕೆಲವೇ ಜನರು ಕಲಿತು, ಉಳಿದ ಕನ್ನಡ ಮಾಧ್ಯಮದ ಬಹುಸಂಖ್ಯಾತರ ಮೇಲೆ ಸವಾರಿ ಮಾಡುವಂತಹ ಸ್ಥಿತಿಯನ್ನೇಕೆ ನಿರ್ಮಿಸಲಾಗಿದೆ?  ಕನ್ನಡವನ್ನು ಉಳಿಸಿ ಬೆಳೆಸಲು ಕಲಿಯುವ ಕನ್ನಡದ ಕಂದಮ್ಮಗಳು ಮಾತ್ರ ಹರಕೆಯ ಕುರಿಗಳಾಗಬೇಕೆ?  ಅಸಲಿಗೆ, ಮಾತೃಭಾಷೆಯಲ್ಲಿಯೇ ಶಿಕ್ಷಣವಾಗಬೇಕು ಎಂಬುದೇ ಹುರುಳಿಲ್ಲದ್ದಾಗಿದೆ. ಮಾತೃಭಾಷೆಯಲ್ಲಿ ಅಥವ ಮನೆಯ ಮಾತಿನಲ್ಲಿ  ಕಲಿಸುವುದು ಎಳೆಯ ಮಕ್ಕಳ ಕಲಿಕೆಗೆ ಸಹಕಾರಿಯಾಗುವುದು, ಆದುದರಿಂದ ಕನ್ನಡದ ಮಾಧ್ಯಮದಲ್ಲಿಯೇ ಕಲಿಸಬೇಕೆಂದು ಹೇಳುವವರು, ಮನೆಯಲ್ಲಿ ತುಳು, ಕೊಡವ, ಹವ್ಯಕ, ಕೊಂಕಣಿ ಮತ್ತು ಲಂಬಾಣಿ ಭಾಷೆಯನ್ನು ಮಾತನಾಡುವ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಎಂಬ ವಿಷಯದಲ್ಲಿ ಜಾಣ ಮೌನ ವಹಿಸುತ್ತಾರೆ.

ನಮ್ಮ ನಾಡಿನಲ್ಲಿ ಏಕರೂಪಿ ಪ್ರಾಥಮಿಕ ಶಿಕ್ಷಣವಿಲ್ಲ.  ಉಳ್ಳವರು ಹಣ ತೆತ್ತು  ತಮ್ಮ ಮಕ್ಕಳನ್ನು ಪ್ರತಿಷ್ಠಿತ ಇಂಗ್ಲಿಷ್ ಶಾಲೆಗೆ ಸೇರಿಸಿದರೆ, ಹಣವಿಲ್ಲದ ಬಡವರು, ಕೆಲವು ಬಾರಿ,  ಸೂರಿಲ್ಲದ ಏಕೋಪಾಧ್ಯಾಯ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಬೇಕಾದ ಸ್ಥಿತಿ ಇದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ, ನಾಡಿನ ಸಾಹಿತ್ಯವಲಯದ ಎಲ್ಲ ವರಿಷ್ಠರ ಆಗ್ರಹದಂತೆ ನಾಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಒತ್ತಾಸೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾತ್ರ ಬಂದು ನಿಂತಿದೆ. ಅದು ಸಿರಿವಂತರ ಮಕ್ಕಳು ಹೋಗುವ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಜಾರಿಗೊಳ್ಳುವಲ್ಲಿ ವಿಫಲವಾಗಿದೆ. ಹೀಗೆ, ತಾರತಮ್ಯ ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಿಂದ ಬಂದ ಸಿರಿವಂತರ ಮತ್ತು ಬಡವರ ಮಕ್ಕಳು  ಮುಂದೆ  ಸರ್ಕಾರವೇ ನಡೆಸುವ ಇಂಗ್ಲಿಷ್ ಮಾಧ್ಯಮದ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರಗಳಾದ, IIT, AIIMS, IIM, IISC ಇತ್ಯಾದಿ  ಸಂಸ್ಥೆಗಳಿಗೆ ಪ್ರವೇಶಕೋರಿ ಅವು ನಡೆಸುವ  ಪ್ರವೇಶ ಪರೀಕ್ಷೆಯಲ್ಲಿ  ಒಟ್ಟಿಗೆ, ಒಂದು common level playing ground ಇಲ್ಲದಂಥ ಸ್ಥಿತಿಯಲ್ಲಿ, ಸ್ಪರ್ಧಿಸುತ್ತಾರೆ. ಈ ತಾರತಮ್ಯದ ಸ್ಪರ್ಧೆಯಲ್ಲಿ ವಿಜೇತರು ಯಾರು ಎಂದು ಹೇಳಬೇಕಾಗಿಲ್ಲ. ಸ್ಪರ್ಧೆಯ ಮುನ್ನವೇ ಅದು ತಿಳಿದಿರುತ್ತದೆ. ತಮಗೆ ಗೊತ್ತಿಲ್ಲದ ಭಾಷಾ ಮಾಧ್ಯಮದಲ್ಲಿ  ಸರಿಯಾಗಿ ಒಂದು ವಾಕ್ಯವನ್ನು ರಚಿಸಲು ಅಶಕ್ತರಾದ ಮಕ್ಕಳು ಇಡೀ ವಿಷಯವನ್ನು ಆ ಭಾಷೆಯಲ್ಲಿ ಬರೆದು ಉತ್ತೀರ್ಣರಾಗುವುದು ಸಾಧ್ಯವೆ?  ಸರಿಯಾದ ತಯಾರಿ ಇಲ್ಲದೆ ಏಕಾ ಏಕಿ ಕನ್ನಡದ ಮಾಧ್ಯಮದಲ್ಲಿ ಓದಿದ ಮಕ್ಕಳನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಯುವ ಪರೀಕ್ಷೆಯನ್ನು ಎದುರಿಸುವಂತೆ ನಿರೀಕ್ಷಿಸುವುದು ಶಕ್ಯವೆ? ಅಸಹಾಯಕ  ಬಡ ಗ್ರಾಮೀಣ ಮಕ್ಕಳು ಫೇಲಾಗಿ ಹೋಗುತ್ತಾರೆ.  ಮೊದಲಿಂದಲೂ ಇಂಗ್ಲಿಷ್ ನಲ್ಲಿ ಓದಿ, ಬರೆದು, ಮಾತನಾಡುವ ತಾಲೀಮು ನಡೆಸಿರುವ ಉಳ್ಳವರ ಮಕ್ಕಳು ಸಹಜವಾಗಿ ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ.  ಉದಾಹರಣೆಗೆ ಸರ್ಕಾರಿ ವೆಚ್ಚದಲ್ಲಿ ನಡೆಯುವ   Indian Institutes of Management(IIMs) ಗಳು ಒಡ್ಡುವ ಪ್ರವೇಶ ಪರೀಕ್ಷೆಯ ಕಬ್ಬಿಣದ ಕಡಲೆಯಂಥ  ಇಂಗ್ಲಿಷ್ ಟೆಸ್ಟಿನಲ್ಲಿ ಕೆಲ ಇಂಗ್ಲಿಷ್ ಮಾಧ್ಯಮದ ಹುಡುಗರೇ ಫೇಲಾಗುವಂತಿರುವಾಗ,  ಸರ್ಕಾರಿ ಕನ್ನಡ ಶಾಲೆಯಿಂದ ಬಂದ ಮಕ್ಕಳು ಹೇಗೆ ಪಾಸಾಗುತ್ತಾರೆ?  ಇದು ಅವರನ್ನು ಅವಮಾನಕ್ಕೀಡುಮಾಡುವ ಸಂಗತಿಯಾಗಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ ಓದದಿದ್ದುದು ತಪ್ಪಾಯಿತು ಎಂದು ಭಾವಿಸುವಂತೆ ಪ್ರೇರೇಪಿಸಿ ಕೀಳರಿಮೆಯನ್ನು ಉಂಟುಮಾಡುತ್ತಿದೆ. ಇನ್ನು ಸಹಜವಾಗಿ ಪ್ರತಿಷ್ಠಿತ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಕಲಿತ ಉಳ್ಳವರ ಮಕ್ಕಳೇ, ಸರ್ಕಾರ ನಡೆಸುವ ಈ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಪ್ರವೇಶ ಪಡೆಯುತ್ತಾರೆ; ಏನಿದರ ಅರ್ಥ?  ಶ್ರೇಷ್ಠ ಉನ್ನತ ಶಿಕ್ಷಣವನ್ನು ಸರ್ಕಾರವೇ ಮುಂದೆ ನಿಂತು ಜನರ ತೆರಿಗೆ ಹಣದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದ ಉಳ್ಳವರ ಮಕ್ಕಳಿಗೆ ಮಾತ್ರ ನೀಡಿದಂತಾಗಲಿಲ್ಲವೆ?  ಇದು ಮೆರಿಟ್ ಹೆಸರಿನಲ್ಲಿ ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ  ಓದಿಬಂದ ಬಡವರ ಮಕ್ಕಳು ಈ ಉನ್ನತ ಶಿಕ್ಷಣ ಕೇಂದ್ರಗಳ ಸನಿಹ ಸುಳಿಯದಂತೆ ಮಾಡಿರುವಂಥ ವ್ಯವಸ್ಥಿತ ಸಂಚಲ್ಲವೆ?  ಹಾಗಿಲ್ಲದಿದ್ದರೆ, ಸರ್ಕಾರವೇ ನಡೆಸುವ ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಉಳಿವಿಗಾಗಿ ಹೆಗಲು ಕೊಟ್ಟ ಈ ಅಮಾಯಕ ಬಡ ಕನ್ನಡದ ಕಂದಮ್ಮಗಳು ಕಲಿತ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯುವಂತೆ ವ್ಯವಸ್ಥೆಯನ್ನು ಏಕೆ ರೂಪಿಸಿಲ್ಲ?   ಬಹುಭಾಷಾ ದೇಶವಾದ ಭಾರತದಲ್ಲಿ,  ಜಾಗತೀಕರಣದ ಈ ಹೊತ್ತಿನಲ್ಲಿ ಉನ್ನತ ಶಿಕ್ಷಣವನ್ನು ಸರ್ವ-ಸಂಪರ್ಕ ಭಾಷೆಯಾದ ಇಂಗ್ಲಿಷ್ ನಲ್ಲಿಯೇ ನೀಡಬೇಕಾದ ಅನಿವಾರ್ಯತೆ ಇದ್ದರೆ ಬಡವರ ಕನ್ನಡ ಕಂದಮ್ಮಗಳು ಈ ಇಂಗ್ಲಿಷ್ ಮಾಧ್ಯಮದ  ಉನ್ನತ ಶಿಕ್ಷಣವನ್ನು ಪಡೆಯಲು ಸಮರ್ಥರಾಗುವಂತೆ  ಅವರಿಗೂ ಪ್ರಾಥಮಿಕ ಶಿಕ್ಷಣವನ್ನು ಉಳ್ಳವರ ಮಕ್ಕಳಂತೆ ಇಂಗ್ಲಿಷ್ ನಲ್ಲಿ ಏಕೆ ನೀಡುತ್ತಿಲ್ಲ?  ಕನ್ನಡದ ಉದ್ಧಾರಕ್ಕೆ ಈ ನೆಲದ ಕನ್ನಡ ಮಕ್ಕಳು ಹರಕೆಯ ಕುರಿಗಳೆ?

ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯೋಗ ಶಾಲೆಯ ಗಿನ್ನಿ-ಪಿಗ್ಸಗಳಾಗಿವೆಯೆ ನಮ್ಮಈ  ಕನ್ನಡದ ಕಂದಮ್ಮಗಳು?  ಈ ನಾಡಿನ ಇತರ ಭಾಷೆಗಳಾದ  ತುಳು, ಕೊಂಕಣಿ, ಕೊಡವ, ಹವ್ಯಕ, ಮತ್ತು ಲಂಬಾಣಿ ಭಾಷೆಗಳು ಹೇಗೆ ಉಳಿದು ಬೆಳೆಯುತ್ತಿವೆ ಎನ್ನುವ ಕಡೆಗೆ ಗಮನ ಹರಿಸಿದರೆ, ಈ ನೆಲದ ಕನ್ನಡ ಮಕ್ಕಳು ಹರಕೆಯ ಕುರಿಗಳಾಗುವುದು ನಿಲ್ಲುತ್ತದೆ.

ಬಿಳಿಯ ಮೈಬಣ್ಣದಾಚೆಯ ಸೌಂದರ್ಯ

ವಾಹ್! ಏನ್ ಚಂದ ಇದ್ದಾಳ್ರಿ ಆಕಿ! ಕೈ ತೊಳ್ದು ಮುಟ್ಟಬೇಕ್ರಿ…
ಇಲ್ಲಿ ನೋಡಿ! ಎಂಥ ರೂಪವತಿ ಅಂತಿರಾ, ಹಾಲಿನಂಥ ಬಿಳುಪು; ಹೆಣ್ಣು ಅಂದರೆ ಹಾಗಿರಬೇಕು !!

ಎಂಬೆಲ್ಲಾ ಉದ್ಗಾರಗಳ ನಡುವೆ ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟ. “ ಗೌರಿ, ನೀನು ಎಷ್ಟು ಬೆಳ್ಳಗಿದ್ದೀಯೆ” ಎಂದ ಕೂಡಲೆ ಅವಳು “ನಮ್ಮ ಅಜ್ಜಿ ಎಷ್ಟು ಬೆಳ್ಳಗಿದ್ರು ಅಂದ್ರೆ, ನಮ್ಮ ತಾತ ಅವರ ಮಾವನನ್ನು ತುಂಬ ಓಲೈಸಿ, ಹಿಂದೆ ಓಡಾಡಿ, ಕಾಡಿ ಬೇಡಿ ಒಪ್ಪಿಸಿ, ನಮ್ಮ ಅಜ್ಜಿಯನ್ನು ಮದುವೆ ಆದ್ರಂತೆ. ನಮ್ಮ ತಾತ ಏನು ಕಡಿಮೆ ಇರಲಿಲ್ಲ ನೋಡಿ, ಅವ್ರೂ ಕೆಂಪಗೆ ಎತ್ತರಕ್ಕೆ ಒಳ್ಳೆ ಸುರ ಸುಂದರಾಂಗ; ಆದ್ರೆ, ಅಷ್ಟೊಂದು ಸ್ಥಿತಿವಂತ ಅಲ್ಲ; ಆದ್ರೂ ಕಷ್ಟ ಪಟ್ಟು ಬೆಳ್ಳಗಿರೋ ಹುಡುಗಿನೇ ಬೇಕು ಅಂತ ಓಡಾಡಿ, ಹೋರಾಡಿ, ‘ದಿಲ್ ವಾಲೆ ದುಲ್ಹನಿಯಾ…’ ಸಿನಿಮಾದ ರೀತಿಯಲ್ಲಿ ಹಠಕ್ಕೆ ಬಿದ್ದು, ಕೊನೆಗೂ ತಮ್ಮ ಮಾವನ ಮನಸ್ಸು ಗೆದ್ದು ನಮ್ಮ ಅಜ್ಜಿಯನ್ನು ಮದುವೆ ಆದ್ರು; …ಅದಕ್ಕೆ ನಾನು !“ ; ಎಂದು ಹೆಮ್ಮೆಯಿಂದ ಬೀಗುತ್ತ ತನ್ನ ಬಿಳಿಯ ಮೈಬಣ್ಣ ಬಳುವಳಿ ಬಂದ ಪರಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವಳು. ಪಾರ್ವತಿಗೋ ಅದು ಸಂಕಟ; “ನೀನು ಥೇಟ್ ನಿಮ್ಮ ಅಪ್ಪನ ಥರಾನೆ ಕಣೆ! “ ಎಂದು ಹೇಳಿದರೆ, ಅವಳು “ನಮ್ಮ ಅಮ್ಮನೂ ಎಷ್ಟು ಬೆಳ್ಳಗಿದ್ದಾಳೆ ಗೊತ್ತ, ಈ ಕಪ್ಪಗಿರೊ ಅಪ್ಪನನ್ನು ಹೇಗೆ ಒಪ್ಪಿದಳೋ ಕಾಣೆ; ನಾನಾಗಿದ್ದರೆ ಒಪ್ಪುತ್ತಿರಲಿಲ್ಲ..” ಎಂದು ತನ್ನ ಶ್ಯಾಮಲ ಮೈಬಣ್ಣವನ್ನು ಶಪಿಸುವಳು.

Black_White_two_women

ಹೀಗೆಲ್ಲ ಏಕೆ? ಸೌಂದರ್ಯವೆಲ್ಲ ಈ ಬಿಳಿಯ ಮೈಬಣ್ಣದೊಳಗೆ ಅಡಗಿ ಕುಳಿತ ಪರಿ ಹೇಗೆಂದು ಯೋಚಿಸುತ್ತ ಕುಳಿತೆ. ಅಂದು 1994 ಇಸವಿಯ ನವೆಂಬರ್, 19 ತಾರೀಖಿನ ದಿನ; ಭುವನ ಸುಂದರಿ ಸ್ಪರ್ಧೆಯ ಅಂತಿಮ ಕ್ಷಣಗಳು ಟೀವಿಯಲ್ಲಿ ಬಿತ್ತರವಾಗುತ್ತಿದ್ದವು; ದಕ್ಷಿಣ ಆಫ್ರಿಕಾದ ಶ್ಯಾಮ ಸುಂದರಿ ಮತ್ತು ವೆನಿಜುವೆಲಾದ ನೀಳ ಸುಂದರಿಯ ಜೊತೆಗೆ ನಮ್ಮ ದೇಶದ ಸುಂದರಿಯೊಬ್ಬಳು ಅಂತಿಮ ಸುತ್ತಿನಲ್ಲಿದ್ದ ಮೂವರು ಸ್ಪರ್ಧಿಗಳು. ಈ ಮೂವರಲ್ಲಿ ಒಬ್ಬರು ಮುಂದಿನ ಕ್ಷಣಗಳಲ್ಲಿ ವಿಶ್ವ ಸುಂದರಿಯರಾಗುವವರಿದ್ದರು. ಯೂರೋಪಿಯನ್ನರೇ ಆಗಿರುವ ಆಯೋಜಕರ ಸೌಂದರ್ಯ ಪ್ರಜ್ಞೆಯ ಪರಿಧಿಯೊಳಗೆ ಭಾರತೀಯ ನಾರಿಯರು ಬಂದಿರುವುದು ಖುಷಿಯಾಗಿತ್ತು. ಹಿಂದಿನ ವರ್ಷ ಜಮೈಕಾದ ಒಬ್ಬ ಶ್ಯಾಮಲ ವರ್ಣದ ಸುಂದರಿಯು ವಿಶ್ವ ಸುಂದರಿಯಾಗಿದ್ದರಿಂದ ಈ ವರ್ಷ ಆಯೋಜಕರ ಕೃಪೆ ಭಾರತೀಯ ಸ್ಪರ್ಧಿಯಮೇಲೆ ಹೊರಳಬಹುದೆಂಬ ಆಶಾಭಾವನೆಯೊಂದಿಗೆ ಮತ್ತು ಕೊಂಚ ಲೆಕ್ಕಚಾರದೊಂದಿಗೆ ಕುಳಿತೆ. ಆಗತಾನೆ ಭಾರತದಲ್ಲಿ ನರಸಿಂಹರಾಯರ ಸರಕಾರ ಮನಮೋಹನ ಸಿಂಘರ ಸಲಹೆಯಂತೆ ಆರ್ಥಿಕ ಉದಾರೀಕರಣದ ನೀತಿಯಡಿ ಭೌಗೋಳಿಕರಣದತ್ತ ಹೆಜ್ಜೆ ಇಟ್ಟಿತ್ತು. ಹಲವು ಬಿಲಿಯನ್ ಡಾಲರ್ ಗಳ ಸೌಂದರ್ಯ ಸಾಧನಗಳ, ಸೌಂದರ್ಯ ವರ್ಧಕಗಳ ಭಾರತೀಯ ಮಾರುಕಟ್ಟೆ ವಿಶ್ವದ ಕಣ್ಣಿಗೆ ಬಿದ್ದಿತ್ತು. ಹೀಗಿರುವಾಗ ಭಾರತೀಯ ನಾರಿಯು ಗೆಲ್ಲದೆ, ತನ್ಮೂಲಕ ಎಲ್ಲ ಭಾರತೀಯ ನಾರಿಯರು ಹೆಮ್ಮೆಯಿಂದ ಬೀಗದೆ ಇಲ್ಲಿನ ಬೃಹತ್ ಮಾರುಕಟ್ಟೆಯು ತೆರೆದು ಕೊಳ್ಳುವಂತಿರಲಿಲ್ಲ; ನನ್ನ ಲೆಕ್ಕಾಚಾರದಲ್ಲಿ ಈ ಬಾರಿ ಭಾರತೀಯ ಸುಂದರಿ ಗೆಲ್ಲಲೇಬೇಕಾಗಿತ್ತು. ಎಂದಿನಂತೆ ಕೊನೆಯ ಪ್ರಶ್ನಾವಳಿ ಸುತ್ತಿಗಾಗಿ ಎಲ್ಲರೂ ಕಾಯುತ್ತಿದ್ದರು. ಇಷ್ಟು ಸಲೀಸಾಗಿ ಒಂದು ಪ್ರಶ್ನೆಯ ಉತ್ತರವು ಒಂದು ಕಿರೀಟವನ್ನು ಗೆಲ್ಲುವ ಈ ವಿಲಕ್ಷಣ ಪದ್ದತಿಯು ನನಗೆ ರೋಚಕವಾಗಿ ಕಾಣುತ್ತಿತ್ತು! ಅಂತೂ ನಮ್ಮ ಭಾರತೀಯ ಸುಂದರಿ ಗೆದ್ದಳು. ಭಾರತೀಯ ಸೌಂದರ್ಯ ಸಾಧನಗಳ, ಸೌಂದರ್ಯ ವರ್ಧಕಗಳ ಮಾರುಕಟ್ಟೆಗೆ ಜಾಗತಿಕ ಮೆರುಗು ಬರತೊಡಗಿತು. ಬೆಳ್ಳಗಿರುವುದೇ ಸೌಂದರ್ಯ, ಬೆಳ್ಳಗಾಗುವುದೇ ಸೌಂದರ್ಯದ ಸಿದ್ಧಿಗೆ ಇರುವ ಏಕೈಕ ಹಾದಿ ಎಂದು ಉತ್ಪಾದಕರು ಎಲ್ಲ ಮಾಧ್ಯಮಗಳಲ್ಲಿ ಈಗಾಗಲೇ ಮನೆ ಮಾಡಿದ್ದ ನಂಬಿಕೆಗೆ ನೀರೆರೆಯುವಂತೆ ಬೊಬ್ಬೆಹೊಡೆಯಲಾರಂಭಿಸಿದರು. ಮಾರುಕಟ್ಟೆ ವೃದ್ಧಿಸತೊಡಗಿತು; ಅಲ್ಲಿಂದ ಸಾಲಾಗಿ ನಮ್ಮ ಹುಡುಗಿಯರೇ ಹಲವು ಇಂಥ ಸ್ಪರ್ಧೆಗಳನ್ನು ಗೆಲ್ಲತೊಡಗಿದರು!

ಒಂದು ಪ್ರಬಲವಾದ ಆರ್ಥಿಕ ಹಿತಾಸಕ್ತಿ ಮತ್ತು ಪ್ರಭಾವಿ ರಾಜಕೀಯ ಅಧಿಕಾರವು ನಮ್ಮೊಳಗಿನ ಸೌಂದರ್ಯದ ಭಾಷೆ, ಪ್ರಜ್ಞೆ, ಪರಿಕಲ್ಪನೆ, ಗ್ರಹಿಕೆ, ಆಸ್ವಾದನೆಯ ತಳಹದಿಯನ್ನೇ ಬದಲಿಸಬಲ್ಲದು ಎಂದು ನಾನು ಹೇಳಿದರೆ ನೀವ್ಯಾರು ಸುಲಭವಾಗಿ ಒಪ್ಪಲಾರಿರಿ. ಅದನ್ನು ಎಲ್ಲರ ತರ್ಕಕ್ಕೆ ನಿಲುಕುವ ರೀತಿಯಲ್ಲಿ ಹೇಳದೆ ಹೋದರೆ ಒಪ್ಪಲು ಸಾಧ್ಯವೇ ಇಲ್ಲ. ಅಸಲಿಗೆ, ನಮಗೆ ಗೊತ್ತಿರುವ ಪರಮ ಸುಂದರಿಯೊಬ್ಬಳನ್ನು ಸುಂದರಿಯಲ್ಲ ಎಂದು ಭ್ರಮಿಸುವುದು ಹೇಗೆ ಎಂಬ ಮೂಲಭೂತ ಸಮಸ್ಯೆ ಏಳುತ್ತದೆ. ಇದನ್ನು ಹೀಗೆ ಪರಿಹರಿಸೋಣ. ಎಪ್ಪತ್ತರ ದಶಕದಲ್ಲಿ ಚಾಲ್ತಿಯಲ್ಲಿದ್ದ, ಬೀದಿಯ ಧೂಳನ್ನು ಸುಯ್ಯೆಂದು ಎಬ್ಬಿಸುತ್ತಿದ್ದ, ತಳಕ್ಕೆ ಹಿತ್ತಾಳೆ ಹಲ್ಲಿನ ಜಿಪ್ ಅನ್ನು ಹೊಲೆದು ಕೊಂಡಿದ್ದ 26 ಇಂಚಿನ ಬೆಲ್ ಬಾಟಮ್ ಪ್ಯಾಂಟನ್ನು ಇಂದು ಯಾರಾದರು ಹಳೆಯ ಪೆಟ್ಟಿಗೆಯ ಗೋರಿಯಿಂದ ಎಬ್ಬಿಸಿ ಧರಿಸಿ ಹೊರಟರೆ, ದಾರಿಹೋಕರು, ”ಹೀಗೆಲ್ಲ ವಿರೂಪವಾಗಿ ಓಡಾಡಬಹುದೆ, ಸಭ್ಯತೆ ಇಲ್ಲದ ಜನ”, ಎಂದು ಮೂಗು ಮುರಿಯಬಹುದು.

ಅಚ್ಚರಿಯೆಂದರೆ, ಒಂದು ಕಾಲದಲ್ಲಿ ಸ್ಪರ್ಧೋಪಾದಿಯಲ್ಲಿ ಹೆಚ್ಚು-ಹೆಚ್ಚು ಅಗಲದ ಹೆಂಗಸರ ಲಂಗದಂತಿದ್ದ ಪ್ಯಾಂಟುಗಳನ್ನು ಹೊಲಿಸಿಕೊಂಡು ಸುರ-ಸುಂದರಾಂಗರಂತೆ ಬೀಗುತ್ತಿದ್ದ ಗಂಡಸರ ಈ ಬೆಲ್ ಬಾಟಮ್ ಪ್ಯಾಂಟ್ ಗೆ ಇವತ್ತಿನ ಕುರೂಪ ಸುತ್ತಿಕೊಂಡದ್ದು ಹೇಗೆ? ತಾರ್ಕಿಕವಾಗಿ, ಅಂದು ಸುಂದರವಾಗಿದ್ದು ಎಂದೆಂದಿಗೂ ಸುಂದರವಾಗಿರಬೇಕಲ್ಲವೆ? ನಮಗೆ ಇಂದು ಅದು ಕುರೂಪವಾಗಿ ಕಾಣುವುದೇಕೆ? ಅಂದು, ಅಷ್ಟೊಂದು ಮೋಹಕವಾಗಿ, ಸುಂದರವಾಗಿದ್ದು ಇಂದು ನಮಗೆ ವಿರೂಪವಾಗಿ ಕಾಣುವುದು ಹೇಗೆ? ಈಗ್ಗೆ ಸುಮಾರು ಏಳುನೂರು-ಎಂಟುನೂರು ವರ್ಷಗಳಾಚೆ ನಮ್ಮ-ನಮ್ಮ ಮೈಬಣ್ಣಗಳೇ ಸುಂದರವೆಂದು ಭಾವಿಸುತ್ತಿದ್ದ ನಮ್ಮೊಳಗೆ, ನಮ್ಮಲ್ಲಿಲ್ಲದ ಬಿಳಿಯ ಮೈಬಣ್ಣವು ಸುಂದರವೆಂದು ನಮ್ಮ ಆಂತರ್ಯವನ್ನು ಹೊಕ್ಕಿದ್ದು ಹೇಗೆ? ಎಂಬ ಜಿಜ್ಞಾಸೆಯ ಎಳೆಯನ್ನು ಹಿಡಿದು ಹೊರಟರೆ ರೋಚಕವಾದ ಇನ್ನೊಂದು ಲೋಕವೇ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.

ಇದು ನಮ್ಮೊಳಗಿನ ಮೌಲ್ಯ ಧಾರಣ ಶಕ್ತಿಯ ಕುಚೋದ್ಯವೇ ಆಗಿದೆ! ಮಾನವ ತನ್ನೊಳಗೆ ನಾಗರೀಕತೆಯ ಬೀಜವು ಬಿತ್ತನೆಯಾಗುವ ಮೊದಲೇ ಸೃಷ್ಠಿಯಲ್ಲಿ ತನಗೆ ಯಾವುದು ಬಲಿಷ್ಠ, ಅಗಾಧ, ಶಕ್ತಿಶಾಲಿ ಎಂದು ತೋರುವುದೋ ಅವೆಲ್ಲವನ್ನು ತನ್ನೊಳಗೆ ಆವಾಹಿಸಿ, ತಾನೇ ಅದಾಗುವ, ಆ ಗುಣಗಳನ್ನು ತನ್ನೊಳಗೆ ರೂಢಿಸಿಕೊಳ್ಳುವ, ದಕ್ಕದಿದ್ದರೆ ಅವುಗಳನ್ನು ಆರಾಧಿಸುವ ಮನಸ್ಥಿತಿ ಹೊಂದಿದ್ದನ್ನು ತಿಳಿದಿದ್ದೇವೆ. ಹೀಗಾಗಿ, ಅವನು ಚೈತನ್ಯದ ಅದಮ್ಯ ಆಕರವಾದ ಸೂರ್ಯನನ್ನು ಆರಾಧಿಸತೊಡಗುತ್ತಾನೆ; ವಾಯು, ಸಮುದ್ರ, ಮಳೆ, ಸೂರ್ಯ-ಚಂದ್ರ ಗ್ರಹಣಗಳ ಸ್ವರೂಪವನ್ನು ಅರಿಯಲಾಗದೆ ಅವುಗಳನ್ನೂ ಆರಾಧಿಸುತ್ತಾನೆ. ಮುಂದೆ ನಾಗರೀಕತೆಯ ಚಿಗುರು ಮೊಳೆತು ನಾಗರೀಕ ಜಗತ್ತಿಗೆ ಕಾಲಿಟ್ಟಮೇಲೆಯೂ ಈ ಗುಣ ಅವನನ್ನು ಬಿಡದೆ ಸಂಪೂರ್ಣ ಆವರಿಸಿದೆ. ಇಂದಿಗೂ ಶ್ರೇಷ್ಠತೆ, ಪ್ರಭಾವ, ಐಶ್ವರ್ಯ, ಅಧಿಕಾರ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರನ್ನು ಆವರಿಸಿಬಿಡುತ್ತವೆ; ಅವೆಲ್ಲವನ್ನು ಗಳಿಸುವ, ಆವಾಹಿಸುವ ಜಾಲಕ್ಕೆ ಬಿದ್ದು, ಅವುಗಳ ಗುಣಲಕ್ಷಣಗಳೆಲ್ಲವೂ ನಮಗೆ ಅಪ್ರತಿಮ, ಅಸದೃಶ ಮತ್ತು ಶ್ರೇಷ್ಠವಾಗಿ ತೋರುವುವು. ಇಂಥಹ ಪ್ರಭಾವಿ ಸ್ಥಾನವನ್ನು ಬ್ರಿಟೀಷರು ತಮ್ಮ ವಸಾಹತು ಆಳ್ವಿಕೆಯಲ್ಲಿ, ಭಾರತವನ್ನೂ ಒಳಗೊಂಡು ಜಗತ್ತಿನ ಹೆಚ್ಚು ಭೂಭಾಗವನ್ನು ಅಲಂಕರಿಸುತ್ತಾರೆ. ಕಾಲ ಕ್ರಮೇಣ ಬ್ರಿಟೀಷರ ಗುಣ ಲಕ್ಷಣಗಳೆಲ್ಲವೂ ಶ್ರೇಷ್ಠವೆಂಬಂತೆ ಎಲ್ಲರಲ್ಲಿ ಮನೆ ಮಾಡುತ್ತವೆ. ಇಂದಿಗೂ ಎಲ್ಲೆಡೆ, ಇಂಗ್ಲಿಷ್ ತಿಳಿದಿರುವುದು, ಮಾತನಾಡುವುದು, ಬಿಳಿಯ ಮೈಬಣ್ಣ, ಪಾಶ್ಚಿಮಾತ್ಯ ಸಂಸ್ಕೃತಿ, ಅವರ ಉಡುಗೆ ತೊಡುಗೆ ಎಲ್ಲವೂ ಹೆಮ್ಮೆಯ, ಪ್ರತಿಷ್ಠೆಯ ಪ್ರತೀಕವೇ ಆಗಿದೆ. ಇಂಗ್ಲಿಷ್ ಸಹ ತಮಿಳು ತೆಲುಗಿನಂತೆ ಕೇವಲ ಒಂದು ಭಾಷೆಯೆಂಬ ಅರಿವು ಮೂಡದೆ ಹೋಗಿದೆ; ನಮ್ಮ ತಲೆ ಕೂದಲು ಕಪ್ಪಿದ್ದರೆ ಸುಂದರವೆಂದು ಭ್ರಮಿಸುವ ನಾವು, ನಮ್ಮ ಮೈ ಬಣ್ಣ ಮಾತ್ರ ಬೆಳ್ಳಗಿರಬೇಕೆಂದು ನಿರೀಕ್ಷಿಸುತ್ತೇವೆ. ಮದುವೆಯಾಗುವ ಹುಡುಗ ಕಪ್ಪಗಿದ್ದರೂ ಹುಡುಗಿ ಬೆಳ್ಳಗಿರಬೇಕೆಂದು ಆಗ್ರಹಿಸುತ್ತಾನೆ. ಪಾಶ್ಚಿಮಾತ್ಯ ಉಡುಪುಗಳೇ ನಾಗರೀಕತೆಯ ಪ್ರತೀಕವೆಂದು ತಿಳಿಯುತ್ತೇವೆ. ಇವುಗಳ ಸಿಕ್ಕಿನಿಂದ, ಇಂದಿಗೂ ನಾವು ಹೊರಬರಲು ಆಗಿಲ್ಲ; ಹೊರ ಬರುವುದಿರಲಿ, ದಿನ ದಿನಕ್ಕೂ ಆ ಸಿಕ್ಕು ಇನ್ನು ಜಟಿಲವಾಗುತ್ತಾ, ನಮ್ಮ ಸಾಮಾಜಿಕ, ಆರ್ಥಿಕ, ತನ್ಮೂಲಕ ಶೈಕ್ಷಣಿಕ ಸ್ತರಗಳನ್ನು ಗಾಢವಾಗಿ ಆವರಿಸಿ ಹೊರಗೆ ಬರಲಾರವೇನೋ ಎಂಬ ಆತಂಕ ಸೃಷ್ಠಿಸಿ ಅಗೋಚರವಾಗಿ ನಮ್ಮನ್ನು, ನಮ್ಮ ಭಾಷೆಯನ್ನು, ನಮ್ಮ ಮೈಬಣ್ಣವನ್ನು, ನಮ್ಮ ಆಚಾರ-ವಿಚಾರಗಳನ್ನು ಅಪಮೌಲ್ಯಗೊಳಿಸಿದೆ. ಕನ್ನಡ ಮಾತನಾಡುವುದು, ಕಪ್ಪು ಮೈಬಣ್ಣ ಹೊಂದಿರುವುದು, ದೇಸೀ ಸಂಸ್ಕೃತಿ, ಆಚಾರಗಳು ನಮ್ಮ ಕಣ್ಣುಗಳಲ್ಲೇ ಕೀಳಾಗಿ ಹೋಗಿವೆ.

ಇಂಥಹ ಆತ್ಮಹತ್ಯಾಕಾರಕ ಮೌಲ್ಯಗಳನ್ನು ನಮ್ಮ ಮನದ ಪರದೆಯ ಹಿಂದೆ ನಮಗರಿವಿಲ್ಲದಂತೆ ನಾವು ಬಿತ್ತಿ ಬೆಳೆದು ಈ ಮನಸ್ಥಿತಿಯಿಂದ ನಮ್ಮವರನ್ನೇ ಒಂದು ಶತಮಾನ ಶೋಷಿಸಿದ ನಿರ್ದಯಿ ಜನಗಳು ನಾವು. ಹೇಗೋ, ಹಂಗೂ-ಹಿಂಗೂ ಬೆಳ್ಳಗಾದ ನಮ್ಮಲ್ಲಿನ ಕೆಲವು ಜನ, ಮೂಲನಿವಾಸಿಗಳಾದ ಕಪ್ಪು ಜನರನ್ನು ಇಂದಿಗೂ ಕೀಳಾಗಿ ಕಾಣುವುದನ್ನು ನೋಡುತ್ತೇವೆ. ಇಂಗ್ಲಿಷ್ ಬಾರದವರನ್ನು ಅನಾಗರೀಕರಂತೆ ಭಾವಿಸುವುದು; ಇಂಗ್ಲಿಷ್ ಬಾರದವರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ನೌಕರಿ ಸಿಗದಿರುವುದು, ಇವೆಲ್ಲ ನಮಗೆ ನಾವು ಮಾಡಿಕೊಳ್ಳುತ್ತಿರುವ ಹಾಡು-ಹಗಲಿನ ಅತ್ಯಾಚಾರವೆಂದರೂ ಕಡಿಮೆಯೆ. ಈ ಕೀಳರಿಮೆಯಿಂದ ಕಪ್ಪು ಜನರು ಸಹ ತಾವೂ ಬೆಳ್ಳಗಾಗುವ ಹಪಾಹಪಿಗೆ ಬಿದ್ದಿದ್ದಾರೆ. ಇಂಗ್ಲಿಷ್ ಬಾರದವರು ಗೊತ್ತಿರುವ ಅಲ್ಪ ಕನ್ನಡವನ್ನೂ ಮರೆತು ಅತ್ತ ಇಂಗ್ಲೀಷೂ ಸರಿಯಾಗಿ ಕಲಿಯಲಾಗದೆ ಇತ್ತ ಕನ್ನಡವೂ ಸರಿಯಾಗಿ ಬರದೆ ಎಡಬಿಡಂಗಿಗಳಾಗುತ್ತಿದ್ದಾರೆ.

ರಾಮ ಮನೋಹರ ಲೋಹಿಯಾ ಇದನ್ನು ಸೊಗಸಾಗಿ ವಿಷ್ಲೇಶಿಸಿದ್ದಾರೆ. This distortion of aesthetic judgement must be ascribed to political influences. The fair-skinned peoples of Europe have dominated the world for over three centuries. For the most part, they conquered and ruled, but in any event, they have possessed power and prosperity, which the coloured peoples have not. If the Negroes of Africa had ruled the world, the world in the manner of whites of Europe, standards of woman’s beauty would undoubtedly have been different. Poets and essayists would have spoken of the soft satin of the Negro skin and its ennobling feel and sight; their aesthetic constructions of the beautiful lip or elegant nose would have tended to be on the side of fullness. Politics influence aesthetics; power also looks beautiful, particularly unequalled power.

‘‘ಈ ವ್ಯಾಕೃತ ಸೌಂದರ್ಯ ನಿರ್ಣಯಕ್ಕೆ ಪ್ರಭಾವಿ ರಾಜಕಾರಣದ ಚೋದನೆಗಳೇ ಕಾರಣವೆನ್ನಬೇಕು. ಬಿಳಿಯ ಮೈಬಣ್ಣದ ಯೂರೋಪಿನ ಜನ ಮೂರು ಶತಮಾನಗಳಿಗೂ ಮೀರಿ ಈ ಜಗತ್ತಿನ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ. ಈ ಜಗತ್ತಿನ ವ್ಯಾಪಕ ಭೂಭಾಗವನ್ನು ವಶಪಡಿಸಿಕೊಂಡು ಆಳಿದ ಅವರು, ಎಲ್ಲೆಡೆ ವರ್ಣೀಯರಿಗೆ ದಕ್ಕದ ಅಧಿಕಾರ ಮತ್ತು ಅಭ್ಯುದಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಂದು ಪಕ್ಷ, ಆಫ್ರಿಕದ ನೀಗ್ರೋಗಳು, ಈ ಬಿಳಿಯ ಯೂರೋಪಿಯನ್ನರಂತೆ ವ್ಯಾಪಕವಾಗಿ ಈ ಜಗತ್ತನ್ನು ಆಳಿದ್ದರೆ, ಹೆಣ್ಣಿನ ಸೌಂದರ್ಯವನ್ನು ಅಳೆಯುವ ಮಾನದಂಡಗಳು ನಿಸ್ಸಂದೇಹವಾಗಿ ಬೇರೆಯಾಗಿರುತ್ತಿದ್ದವು. ಅಗ ಕವಿಗಳು, ಲೇಖಕರು, ನೀಗ್ರೊ ಮೈನ ಮಾರ್ದವ ರೇಶಿಮೆಯ ನುಣುಪನ್ನು, ಉದಾತ್ತವೆನಿಸುವ ಅದರ ಸ್ಪರ್ಷವನ್ನು ಮತ್ತು ಕಣ್ತುಂಬುವ ಅದರ ಸೊಬಗನ್ನು ಹಾಡಿ-ಹೊಗಳುತ್ತಿದ್ದರು; ಮೋಹಕ ತುಟಿ, ಲಾವಣ್ಯಭರಿತ ಮೂಗುಗಳ ಅವರ ರಸಕಲ್ಪನೆಯು ನೀಗ್ರೊಗಳ ತುಂಬಿದ ತುಟಿ, ಮೂಗುಗಳ ಕಡೆಗೆ ಹೊರಳುತ್ತಿತ್ತು. ಹೀಗೆ ರಾಜಕಾರಣವು ರಸಕಲ್ಪನೆಯ ವ್ಯಾಖ್ಯಾನವನ್ನೂ, ಸೌಂದರ್ಯ ಪ್ರಜ್ಞೆಯನ್ನೂ ರೂಪಿಸಬಲ್ಲದು. ಅಂದಹಾಗೆ, ಅಧಿಕಾರವೂ ಸಹ ಸುಂದರವಾಗಿ, ಮೋಹಕವಾಗಿ ಕಾಣುವುದು ; ಅದರಲ್ಲೂ ಎಣೆಯಿಲ್ಲದ ಅಧಿಕಾರವಂತೂ ಇನ್ನೂ ಸುಂದರ, ಇನ್ನೂ ಮೋಹಕ’’.

ಇದರಿಂದ ಸಾಬೀತಾಗುವುದೇನೆಂದರೆ ನಮಗೆ ಕಾಣುವ, ಭಾಸವಾಗುವ, ನಮ್ಮ ಅನುಭವಕ್ಕೆ ಬರುವ ವಸ್ತುವೊಂದರ ಸೌಂದರ್ಯವು ಆ ವಸ್ತುವಿನಲ್ಲಿರುವುದಿಲ್ಲ; ಬದಲಿಗೆ ನಮ್ಮ ಆಂತರ್ಯದಲ್ಲಿರುತ್ತದೆ, ಕಲ್ಪನೆಯಲ್ಲಿರುತ್ತದೆ. ಆದುದರಿಂದ ತಿಳಿದವರು Beauty lies in the eyes of the beholder ಎಂದು ಹೇಳುವುದು. ಸೌಂದರ್ಯವು ನೋಡುವವನ ಕಣ್ಣಿನಲ್ಲಿರುವುದು, ವಸ್ತುವಿನಲ್ಲಲ್ಲ. ಸೌಂದರ್ಯದ ಪರಿಕಲ್ಪನೆಯನ್ನು ಆ ವಸ್ತುವಿನೊಂದಿಗೆ ನಮ್ಮ ಅರಿವಿಗೆಬಾರದಂತೆ ಹೊಂದಿಸಿರುತ್ತೇವೆ; ಹಾಗಾಗಿ ಅದು ಸುಂದರವೆಂಬಂತೆ ಭಾಸವಾಗುವುದು. ಹೀಗೆ ಸಮೂಹವಾಗಿ ಆರೋಪಿಸಲಾದ ಈ ಗುಣಗಳಿಂದ ಹೆಚ್ಚು ಕಡಿಮೆ ಎಲ್ಲರಿಗೂ ವಸ್ತುಗಳು ಸುಂದರವಾಗಿಯೂ, ಕುರೂಪವಾಗಿಯೂ ಕಾಣುತ್ತವೆ. ಅಭಿಪ್ರಾಯ ಬದಲಾದಂತೆ ಹೀಗೆ ಆರೋಪಿಸಲಾದ ಗುಣಗಳೂ ಬದಲಾಗುತ್ತವೆ. ಕೆಲ ವಸ್ತುಗಳ ಮೇಲಿನ ಅಭಿಪ್ರಾಯಗಳು ಹೆಚ್ಚು ಕಾಲ ಉಳಿದಂತೆ ಆ ವಸ್ತುಗಳು ಅವುಗಳ ಮೇಲೆ ಆರೋಪಿಸಲಾದ ಗುಣಗಳನ್ನು ಆಧರಿಸಿ ಅವು ಅಷ್ಟು ಕಾಲ ಸುಂದರವಾಗಿಯೋ, ಕುರೂಪವಾಗಿಯೋ ಕಾಣುತ್ತವೆ.

ಒಂದು ಪ್ರಬಲವಾದ ಆರ್ಥಿಕ ಹಿತಾಸಕ್ತಿ ಮತ್ತು ಪ್ರಭಾವಿ ರಾಜಕೀಯ ಅಧಿಕಾರವು ನಮ್ಮೊಳಗಿನ ಸೌಂದರ್ಯದ ಭಾಷೆ, ಪ್ರಜ್ಞೆ, ಪರಿಕಲ್ಪಪನೆ, ಗ್ರಹಿಕೆ, ಆಸ್ವಾದನೆಯ ತಳಹದಿಯನ್ನೇ ಬದಲಿಸಬಲ್ಲದು. ಇನ್ನಾದರೂ ಈ ಭ್ರಮೆಯಿಂದ ಹೊರಬರೋಣವೆ?